ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

Public TV
2 Min Read

ನವದೆಹಲಿ: ಹಿಂಡನ್‌ಬರ್ಗ್‌ನಲ್ಲಿ ಜಾರ್ಜ್‌ ಸೊರೊಸ್ (George Soros) ಮುಖ್ಯ ಹೂಡಿಕೆದಾರ. ಭಾರತದ ಆರ್ಥಿಕ ಬೆಳವಣಿಗೆಯನ್ನು ಹಳಿತಪ್ಪಿಸಲು ವಿದೇಶದಿಂದ ಪಿತೂರಿ ನಡೆಯುತ್ತಿದೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ವಕ್ತಾರ ರವಿಶಂಕರ್‌ ಪ್ರಸಾದ್‌ (Ravi Shankar Prasad) ದೂರಿದ್ದಾರೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸೆಬಿ (SEBI) ಮುಖ್ಯಸ್ಥೆ ಮಾಧವಿ ಪುರಿ ಬುಚ್ (Madhabi Puru Buch) ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್‌ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್‌ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಕಾಂಗ್ರೆಸ್‌ ಇಂದು ಭಾರತದ ವಿರುದ್ಧವೇ ದ್ವೇಷವನ್ನು ಬೆಳೆಸಿಕೊಂಡಿದೆ. ಭಾರತದ ಷೇರು ಮಾರುಕಟ್ಟೆಗೆ ತೊಂದರೆಯಾದರೆ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗುತ್ತಿದ್ದಾರೆ. ಈಗ ಇವರು ಈ ವಿಷಯದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ ಭಾರತದ ಷೇರು ಮಾರುಕಟ್ಟೆ ಕುಸಿಯಲು ಬಯಸುತ್ತಿದೆ.  ಸಣ್ಣ ಹೂಡಿಕೆದಾರರು ಅಭಿವೃದ್ಧಿ ಹೊಂದಲು ಅವರು ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article