ಜಿಡಿಪಿ ದರ ಶೇ.4.5ಕ್ಕೆ ಕುಸಿತ- 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸು ಕಂಡ ಮೋದಿ ಸರ್ಕಾರಕ್ಕೆ ಶಾಕ್

Public TV
2 Min Read

ನವದೆಹಲಿ: 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುತ್ತೇವೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಇವತ್ತು ಪ್ರಕಟವಾಗಿರುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಜುಲೈ-ಸೆಪ್ಟೆಂಬರ್‍ನ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಶೇ.4.5ಕ್ಕೆ ಕುಸಿದಿದೆ.

ಪ್ರಸ್ತುತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.4.5 ನಷ್ಟಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.5ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಶೇ.0.5ರಷ್ಟು ಜಿಡಿಪಿ ಕುಸಿದಿದೆ. ಕಳೆದ 6 ವರ್ಷಗಳಲ್ಲೇ ಅತ್ಯಂತ ಗಂಭೀರವಾಗಿ ಪಾತಾಳಕ್ಕಿಳಿದಿದ್ದು ಆತಂಕ ಹೆಚ್ಚಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7ರಷ್ಟು ಜಿಡಿಪಿ ದರ ದಾಖಲಾಗಿತ್ತು. ಕಲ್ಲಿದ್ದಲು, ಗಣಿ, ವಿದ್ಯುತ್, ಸಿಮೆಂಟ್, ಸೇವಾ ವಲಯದಲ್ಲಿ ಕ್ಷೇತ್ರಗಳು ಗರಿಷ್ಠ ಇಳಿಮುಖವಾಗಿವೆ. ಕಳೆದ 2 ವರ್ಷಗಳಿಂದ ಸತತವಾಗಿಯೇ ಜಿಡಿಪಿ ದರ ಕುಸಿಯುತ್ತಲೇ ಇದೆ. ದೇಶದ ಆರ್ಥಿಕತೆ ಶೇ.5ಕ್ಕಿಂತ ಕುಸಿದಿರುವುದು 2013ರ ಜನವರಿ-ಮಾಚ್ ನಂತರ ಇದೇ ಮೊದಲು.

2013ರ ಜನವರಿಯಿಂದ ಮಾರ್ಚ್ ಅವಧಿಯ ತೃತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.3ರಷ್ಟಿತ್ತು. ಕೇಂದ್ರದಲ್ಲಿ ಎರಡನೇ ಅವರಿಗೆ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ಸೂತ್ರಗಳನ್ನು ಪ್ರಕಟಿಸಿದ್ದರು. ಆದರೂ ಆರ್ಥಿಕತೆ ಕುಗ್ಗುತ್ತಲೇ ಹೋಗುತ್ತಿದೆ. ಮೊನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ನಿಜ. ಆದರೆ ಆರ್ಥಿಕ ಹಿಂಜರಿತವಾಗಿಲ್ಲ ಎಂದಿದ್ದರು.

ಜಿಡಿಪಿ ಕುಸಿತದ ಬಗ್ಗೆ ಅನೇಕ ಅರ್ಥಶಾಸ್ತ್ರಜ್ಞರು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಜಿಡಿಪಿ ವರದಿ ಪ್ರಕಟವಾಗುತ್ತಿದ್ದಂತೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಾರ್ಷಿಕ ಜಿಡಿಪಿ ದರ ಎಷ್ಟಿತ್ತು?
2014-15 – 7.4 %
2015-16 – 8 %
2016-17 – 8.1 %
2017-18 – 7.2 %
2018-19 – 6.9 %
2019-20 – 5 %(ಮೊದಲ ತ್ರೈಮಾಸಿಕ)
2019-20 – 4.5% (ಎರಡನೇ ತ್ರೈಮಾಸಿಕ)

https://twitter.com/AtharSky92/status/1200397500059803650

Share This Article
Leave a Comment

Leave a Reply

Your email address will not be published. Required fields are marked *