ರಾಜಕೀಯ ಕರ್ತವ್ಯದಿಂದ ನನ್ನನ್ನು ಮುಕ್ತಗೊಳಿಸಿ – ರಾಜಕೀಯ ನಿವೃತ್ತಿ ಸುಳಿವು ನೀಡಿದ ಗಂಭೀರ್‌

Public TV
2 Min Read

ನವದೆಹಲಿ: ಅಚ್ಚರಿ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ (Gautam Gambhir) ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಈ ಕುರಿತು ಸೋಶಿಯಲ್‌ ಮೀಡಿಯಾ X ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಗೌತಮ್‌ ಗಂಭೀರ್‌, ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (JP Nadda) ಜೀ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸುತ್ತೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಜೀ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೊದಲ 100 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆಗಳೂ ನಡೆಯುತ್ತಿವೆ. ಈ ನಡುವೆ ಗಂಭೀರ್‌ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. 2019ರಲ್ಲಿ ಬಿಜೆಪಿ ಸೇರಿದ್ದ ಗೌತಮ್‌ ಗಂಭೀರ್‌ ಅವರು, ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಸ್ಥಾನದಿಂದ ಸ್ಪರ್ಧಿಸಿ 6,95,109 ಮತಗಳ ಅಂತರದಿಂದ ಗೆದ್ದಿದ್ದರು.

ಈ ನಡುವೆ ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ಇದೀಗ ಕೆಕೆಆರ್‌ ತಂಡಕ್ಕೆ ಮೆಂಟರ್‌ ಆಗಿ ಮರಳಿದ್ದಾರೆ. ಈ ಹಿಂದೆ ಗಂಭೀರ್‌ ನಾಯಕನಾಗಿದ್ದ ಕೆಕೆಆರ್‌ (ಕೋಲ್ಕತ್ತಾ ನೈಟ್‌ರೈಡರ್ಸ್‌) ತಂಡ ಎರಡು ಬಾರಿ ಚಾಂಪಿಯನ್‌ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು.

2011ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಟೀಂ ಇಂಡಿಯಾದ ಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್‌ಗಳ ಪೈಕಿ ಒಬ್ಬರಾಗಿದ್ದರು. ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ‌ಪಂದ್ಯದಲ್ಲಿ 97 ರನ್‌ ಗಳಿಸುವ ಮೂಲಕ 28 ವರ್ಷಗಳ ನಂತರ ಭಾರತ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಮತ್ತೆ ಅವರು ಕ್ರಿಕೆಟ್‌ ಲೋಕದತ್ತ ಸಂಪೂರ್ಣ ಗಮನಹರಿಸುವ ಆಸಕ್ತಿ ತೋರಿದ್ದಾರೆ.

Share This Article