ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ಕೋಚ್‌ : ಜಯ್‌ ಶಾ ಅಧಿಕೃತ ಘೋಷಣೆ

Public TV
2 Min Read

ಮುಂಬೈ: ಬಹುದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಕೊನೆಗೂ ಖಚಿತವಾಗಿದ್ದು ಟೀಂ ಇಂಡಿಯಾದ (Team India) ಕೋಚ್‌ ಆಗಿ ಗೌತಮ್‌ ಗಂಭೀರ್‌ (Gautam Gambhir)  ಆಯ್ಕೆಯಾಗಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದ್ದಾರೆ. ಪುರುಷರ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ನೇಮಿಸಲಾಗಿದೆ ಜಯ್ ಶಾ ಪ್ರಕಟಿಸಿದರು.


ಟೀಂ ಇಂಡಿಯಾದ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಆಧುನಿಕ ಕ್ರಿಕೆಟ್‌ ಬಹಳ ವೇಗವಾಗಿ ಬದಲಾಗುತ್ತಿದ್ದು ಗೌತಮ್ ಅವರು ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂಬ ವಿಶ್ವಾಸ ನನಗಿದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಗೌತಮ್‌ ಗಂಭೀರ್‌ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜಯ್‌ ಶಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ರಾಹುಲ್‌ ದ್ರಾವಿಡ್‌ (Rahul Dravid) ಅವರ ನಂತರ ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆ ಅಲಂಕರಿಸುವಂತೆ ಬಿಸಿಸಿಐ ಈ ಹಿಂದೆ ಗೌತಮ್‌ ಗಂಭೀರ್‌ ಬಳಿ ಮನವಿ ಮಾಡಿರುವುದಾಗಿ ವರದಿಯಾಗಿತ್ತು. ಟಿ20 ವಿಶ್ವಕಪ್‌ ಟೂರ್ನಿ ಬಳಿಕ ದ್ರಾವಿಡ್‌ ಅವರ ಮುಖ್ಯಕೋಚ್‌ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಬಿಸಿಸಿಐ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು.

ಗಂಭೀರ್ ಕೋಚಿಂಗ್ ಅನುಭವ ಹೇಗಿದೆ?
ಟೀಂ ಇಂಡಿಯಾಕ್ಕಾಗಿ 2 ಬಾರಿ ವಿಶ್ವಕಪ್‌ ಗೆದ್ದುಕೊಟ್ಟಿರುವ ಗೌತಮ್‌ ಗಂಭೀರ್‌ ಕೋಚಿಂಗ್‌ನಲ್ಲೂ ಅನುಭವ ಹೊಂದಿದ್ದಾರೆ. 2022-23ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ‌ ಮೆಂಟರ್‌ ಆಗಿ ಕೆಲಸ ಮಾಡಿದ್ದ ಗಂಭೀರ್‌, ತಂಡವನ್ನು ಸತತ ಎರಡು ಬಾರಿ ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು. ನಂತರ ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಮುಖ್ಯಕೋಚ್‌ ಆಗಿದ್ದು, ಇವರ ನೇತೃತ್ವದಲ್ಲಿ ಕೆಕೆಆರ್‌ ಸಹ ಪ್ಲೇ ಆಫ್‌ ಪ್ರವೇಶಿಸಿದೆ. ಆದರೆ ದೇಶೀಯ ಅಥವಾ ಅಂತಾರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ ಅನುಭವ ಗಂಭೀರ್‌ ಅವರಿಗಿಲ್ಲ.

Share This Article