ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್

Public TV
3 Min Read

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರೇ ಫುಲ್ ಶಾಕ್ ಗೆ ಒಳಗಾಗಿದ್ದಾರೆ. ಬಂಧಿತ ಆರೋಪಿಗಳಾದ ಪರಶುರಾಮ್ ವಾಗ್ಮೋರೆ ಮತ್ತು ಅಮೋಲ್ ಕಾಳೆ, ಇಬ್ಬರು ಪೊಲೀಸ್ ಅಧಿಕಾರಿಯ ಮನೆಯನ್ನು ಬಾಡಿಗೆ ಪಡೆದುಕೊಂಡು ಸಂಚು ರೂಪಿಸಿದ್ದರು ಎಂಬ ಅಚ್ಚರಿಯ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಆರೋಪಿಗಳು ಮಾಗಡಿ ರಸ್ತೆಯ ಕಡಬನಗೆರೆ ಕ್ರಾಸ್‍ನಲ್ಲಿಯ ಎಸಿಬಿ ಇನ್ಸ್ ಪೆಕ್ಟರ್ ಮನೆಯಲ್ಲಿಯೇ ಬಾಡಿಗೆ ಪಡೆದುಕೊಂಡಿದ್ದರು. ಈ ಇಬ್ಬರು ಸುರೇಶ್ ಎಂಬಾತನ ಹೆಸರಿನಲ್ಲಿ ಮನೆಯನ್ನ ಬಾಡಿಗೆಗೆ ಪಡೆದುಕೊಂಡಿದ್ದರಂತೆ. ಪೊಲೀಸ್ ಮನೆಯಲ್ಲಿಯೇ ಕುಳಿತು ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿವೆ.

ಆದ್ರೆ ಮನೆಯ ಮಾಲೀಕ ಪೊಲೀಸ್ ಅಧಿಕಾರಿಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಸಂಬಂಧ ಎಸ್‍ಐಟಿ ಅಧಿಕಾರಿಗಳು ಮನೆಯ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸಂಬಂಧಿಗಳಿಗೆ ಮನೆಯನ್ನು ನೋಡಿಕೊಳ್ಳುವ ಹಾಗು ಬಾಡಿಗೆ ಪಡೆಯುವ ಜವಾಬ್ದಾರಿಯನ್ನು ಇನ್ಸ್ ಪೆಕ್ಟರ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿ ಯಾರು ವಾಸವಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ ಎನ್ನಲಾಗುತ್ತಿದೆ.

ಬೆಂಗಳೂರಲ್ಲಿ ಮನೆಯನ್ನು ಬಾಡಿಗೆ ನೀಡುವಾಗ ವ್ಯಕ್ತಿಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದ್ರೆ ಪೊಲೀಸ್ ಅಧಿಕಾರಿಯೇ ತನ್ನ ಮನೆಯನ್ನು ಬಾಡಿಗೆಗೆ ನೀಡುವಾಗ ದಾಖಲಾತಿಗಳನ್ನು ಪಡೆದುಕೊಳ್ಳದೇ ಇರೋದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತನಿಖೆಯ ಹಿನ್ನೆಲೆ:
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ದಿನಕ್ಕೊಂದು ರೋಚಕ ಸ್ಟೋರಿಗಳು ಹೊರಬರುತ್ತಿವೆ. ಆರೋಪಿಗಳಿಗೆ ಬಾಡಿಗೆ ನೀಡಲು ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ಮೂಲದ ಮೋಹನ್ ನಾಯಕ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇತ್ತ ಮೋಹನ್ ನಾಯಕ್ ಹೇಳಿಕೆ ಆಧರಿಸಿದ ಹುಬ್ಬಳ್ಳಿ ಮೂಲದ ಇಬ್ಬರು ಮತ್ತು ಮಡಿಕೇರಿ ಮೂಲದ ಓರ್ವನನ್ನು ಎಸ್‍ಐಟಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮೋಲ್ ಕಾಳೆ ರೋಚಕ ಸತ್ಯವನ್ನು ಬಹಿರಂಗ ಮಾಡಿದ್ದಾನೆ. ಈ ಅಮೂಲ್ ಕಾಳೆಗೆ ಯುವಕರನ್ನು ಪರಿಚಯಿಸುತ್ತಿದ್ದ ವ್ಯಕ್ತಿ ಸುಜಿತ್. ಹಿಂದೂಪರ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದ ಸುಜಿತ್, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 10 ಸಾವಿರ ಯುವಕರ ನಂಬರ್ ಪಡೆದುಕೊಂಡಿದ್ದನು. ಬಳಿಕ ಪ್ರತಿಯೊಬ್ಬರಿಗೂ ಕರೆ ಮಾಡಿ ಪರಿಚಯಿಸಿಕೊಂಡಿದ್ದನು. ಫೋನ್ ನಲ್ಲಿ ಮಾತನಾಡುತ್ತಾ, ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದ ಯುವಕರನ್ನು ಸುಜಿತ್ ಆಯ್ಕೆ ಮಾಡಿಕೊಳ್ಳುತ್ತಿದ್ದನು.

ರೈಫಲ್ ತರಬೇತಿ: ಯುವಕರನ್ನು ಆಯ್ಕೆ ಮಾಡಿಕೊಂಡ ಬಳಿಕ ಎಲ್ಲರೊಂದಿಗೆ ನಯವಾಗಿ ಮಾತನಾಡುತ್ತಾ ಧರ್ಮ ವಿರೋಧಿಗಳನ್ನು ಕೊಲೆ ಮಾಡುವಂತೆ ಪ್ರೇರೇಪಿಸಿ ಮೈಂಡ್ ವಾಶ್ ಮಾಡುತ್ತಿದ್ದನಂತೆ. ಇದೇ ರೀತಿ ಯುವಕರ ಮೈಂಡ್ ವಾಶ್ ಬಳಿಕ ಎಲ್ಲರನ್ನು `ದಾದಾ’ ಎಂಬಾತನ ಬಳಿ ಕಳುಹಿಸಿದ್ದನು. ಈ ದಾದಾನ ಅಣತಿಯಂತೆ ಮತ್ತೊಮ್ಮೆ ಯುವಕರ ಪುನರ್ ಆಯ್ಕೆ ನಡೆಯುತ್ತಿತ್ತು. ಆಯ್ಕೆಗೊಂಡ ಯುವಕರಿಗೆ ಸತಾರಾ, ಗೋವಾ, ಮಹಾರಾಷ್ಟ್ರ, ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಏರ್ ಗನ್ ನ ಮೂಲಕ ರೈಫಲ್ ಬಳಸಲು ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿವೆ.

ಪಕ್ಕಾ ಶಾರ್ಪ್ ಶೂಟರ್ ಅಂತಾ ತಿಳಿದ ಮೇಲೆ ದಾದಾ ಎಂಬಾತ ಬರೋಬ್ಬರಿ 100 ಯುವಕರನ್ನು ಅಮೋಲ್ ಕಾಳೆಗೆ ಪರಿಚಯಿಸಿದ್ದನು. ಈ 100 ಯುವಕರಲ್ಲಿ ಪರಶುರಾಮ್ ವಾಗ್ಮೋರೆ ಸಹ ಒಬ್ಬ ಎಂದು ಹೇಳಲಾಗುತ್ತಿದೆ. ಹಿಂದೂ ಧರ್ಮದ ಉದ್ಧಾರಕ್ಕಾಗಿ ನೀವು ವಿಷ್ಣುವಿನ ಅವತಾರದಲ್ಲಿ ಜನಿಸಿದ್ದೀಯಾ, ಧರ್ಮದ ವಿರುದ್ಧ ಮಾತನಾಡುವರನ್ನು ಕೊಲ್ಲಬೇಕು. ನಿನ್ನ ಕೈಯಲ್ಲಿರುವ ಬಂದೂಕು ವಿಷ್ಣುವಿನ ಬಳಿಯ ಸುದರ್ಶನ ಚಕ್ರವಿದ್ದಂತೆ. ಯಾರು ಧರ್ಮಕ್ಕೆ ವಿರುದ್ಧ ಮಾತನಾಡುತ್ತಾರೆಯೋ ಅಂತಹವರನ್ನು ಶತ್ರುಗಳ ರೀತಿಯಲ್ಲಿಯೇ ಕೊಂದು ಮುಗಿಸಬೇಕು ಎಂದು ಅಮೂಲ್ ಕಾಳೆ, ಪರಶುರಾಮ್ ವಾಗ್ಮೋರೆಗೆ ಉಪದೇಶ ಮಾಡಿ ಬೆಂಗಳೂರಿಗೆ ಕಳುಹಿಸಿದ್ದ ಎಂಬ ಮಾಹಿತಿ ಈ ಹಿಂದೆ ಪಬ್ಲಿಕ್ ಟಿವಿಗೆ ಲಭಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *