ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರ ರೇಖಾಚಿತ್ರ ಬಿಡುಗಡೆ

Public TV
2 Min Read

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಮೂವರ ಹಂತಕರ ರೇಖಾಚಿತ್ರವನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಇಂದು ಬಿಡುಗಡೆಗೊಳಿಸಿದೆ.

ಹಂತಕರು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಎಸ್‍ಐಟಿ ಆರೋಪಿಗಳ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದಾರೆ. ಗೌರಿ ಅವರ ಕೊಲೆಯಾಗಿ ಇಂದಿಗೆ ಒಂದು ತಿಂಗಳು ಹತ್ತು ದಿನಗಳಾಗಿವೆ.

ರೇಖಾಚಿತ್ರ ತಯಾರಾಗಿದ್ದು ಹೇಗೆ?
ದಿನಾಂಕ 05-09-2017ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ರೇಖಾಚಿತ್ರದಲ್ಲಿರುವ ವ್ಯಕ್ತಿಗಳು ಗೌರಿಯವರ ಮನೆಯ ಆಸುಪಾಸಿನಲ್ಲಿ ಮೋಟರ್ ಸೈಕಲ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದು ಮತ್ತು ಕೆಲವು ವಿಡಿಯೋ ಕ್ಲಿಪ್ ಗಳ ಆಧಾರದ ಮೇಲೆ ನುರಿತ ರೇಖಾಚಿತ್ರ ಕಲಾವಿದರಿಂದ ಚಿತ್ರ ಸಿದ್ಧಪಡಿಸಲಾಗಿದೆ.

ಹಂತಕರು ಗೌರಿ ಅವರ ಹತ್ಯೆಯ ಏಳು ದಿನಗಳ ಮೊದಲೇ ನಗರದಲ್ಲಿ ಬಂದು ವಾಸವಾಗಿದ್ದರು. ಈಗಾಗಲೇ ಹಲವಾರು ಸಂಘ-ಸಂಸ್ಥೆಗಳನ್ನು, ಮಾಜಿ ನಕ್ಸಲ್‍ರನ್ನು ಸೇರಿದಂತೆ 200 ರಿಂದ 250 ಜನರನ್ನು ವಿಚಾರಿಸಲಾಗಿದೆ. ಆದರೆ ಹಂತಕರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹಂತಕರು ಗೌರಿ ಅವರ ಹತ್ಯೆಗೆ 7.65 ಕಂಟ್ರಿ ಮೇಡ್ ಪಿಸ್ತೂಲ್ ಬಳಸಿದ್ದು, ವೀಡಿಯೊ ಕ್ಲಿಪ್ ನಲ್ಲಿರುವ ವ್ಯಕ್ತಿಯೊಬ್ಬ ಗೌರಿ ಮನೆಯ ಸುತ್ತ ಓಡಾಡಿರೋದು ಪತ್ತೆಯಾಗಿದೆ. ಹಾಗಾಗಿ ಸಾರ್ವಜನಿಕರು ವಿಡಿಯೋ ಕ್ಲಿಪ್ ಮತ್ತು ರೇಖಾಚಿತ್ರಗಳನ್ನು ನೋಡಿ ಸುಳಿವು ನೀಡಬೇಕು ಎಂದು ಎಸ್‍ಐಟಿ ಮಖ್ಯಸ್ಥ ಐಜಿಪಿ ಬಿಕೆ ಸಿಂಗ್ ಹೇಳಿದ್ದಾರೆ.

ಸಾರ್ವಜನಿಕರಲ್ಲಿ ವಿನಂತಿ:
ಗೌರಿ ಲಂಕೇಶ್ ಹತ್ಯೆಯಲ್ಲಿ ಈ ರೇಖಾಚಿತ್ರಗಳಲ್ಲಿರುವ ಮತ್ತು ವೀಡಿಯೋ ನಲ್ಲಿರುವ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಅನುಮಾನವಿದ್ದು, ಇವರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ಕೂಡಲೇ ವಿಶೇಷ ತನಿಖಾ ತಂಡ, ಸಿ.ಐ.ಡಿ., ಬೆಂಗಳೂರು, ಇವರಿಗೆ ಅಥವಾ ಮೊಬೈಲ್ ಸಂಖ್ಯೆ 9480800202 ನಂಬರಿಗೆ ಅಥವಾ sit.glankesh@ksp.gov.in ಗೆ ಮಾಹಿತಿ ನೀಡಲು ಕೋರಿದೆ.

ಸಂಪರ್ಕಿಸಬೇಕಾದ ವಿಳಾಸ:
ಕೊಠಡಿ ಸಂಖ್ಯೆ-104.
ವಿಶೇಷ ತನಿಖಾ ತಂಡ, ಸಿಐಡಿ ಕಚೇರಿ.
ಮೊಬೈಲ್ ಸಂಖ್ಯೆ- 9480800202
ಈ-ಮೇಲ್ ವಿಳಾಸ- sit.glankesh@ksp.gov.in
ವಾಟ್ಸಪ್ ನಂಬರ್- 9480800304, 9480801710

https://www.youtube.com/watch?v=9WT11xFPWIc

https://www.youtube.com/watch?v=gMCRfdWRT8w

 

 

Share This Article
Leave a Comment

Leave a Reply

Your email address will not be published. Required fields are marked *