ಗೌರಿ ಲಂಕೇಶ್ ಹತ್ಯೆ ಪ್ರಕರಣ – ಆರೋಪಿ ವಿರುದ್ಧ KCOCA ಪ್ರಕರಣ ಮರು ಸ್ಥಾಪಿಸಲು ಸುಪ್ರೀಂ ಸೂಚನೆ

Public TV
3 Min Read

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೋಹನ್ ನಾಯಕ್ ವಿರುದ್ಧ KCOCA ಪ್ರಕರಣವನ್ನು ಮರು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ಆದೇಶ ನೀಡಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿ ಮೋಹನ್ ನಾಯಕ್ ವಿರುದ್ದ ದಾಖಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ಕಾಯ್ದೆ (KCOCA) ಪ್ರಕರಣವನ್ನು ಕರ್ನಾಟಕ ಹೈಕೊರ್ಟ್ ಈ ಹಿಂದೆ ರದ್ದು ಮಾಡಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಪ್ರಶ್ನಿಸಿದ್ದರು. ಸುಧೀರ್ಘ ವಿಚಾರ ನಡೆಸಿದ್ದ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ತ್ರಿ ಸದಸ್ಯ ಪೀಠ ಇಂದು ತನ್ನ ಆದೇಶ ಪ್ರಕಟಿಸಿತು. ಇದನ್ನೂ ಓದಿ: ಗೌರಿ ಲಂಕೇಶ್‍ಗೆ ಪಾಕ್‍ನಿಂದ ಡ್ರಗ್ಸ್ ಸಪ್ಲೈ ಆಗ್ತಿತ್ತು: ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ

ಮೋಹನ್ ನಾಯಕ್, ಹತ್ಯೆಗೂ ಮುನ್ನ ಮತ್ತು ನಂತರ ಆರೋಪಿಗಳಿಗೆ ಆಶ್ರಯ ನೀಡಿದ್ದರು. ಈ ಹಿನ್ನಲೆಯಲ್ಲಿ ನಾಯಕ್ ವಿರುದ್ಧ ಕೆಸಿಒಸಿಎ ಸೆಕ್ಷನ್ 3 (1) (i), 3 (2), 3 (3) ಮತ್ತು 3 (4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಹೈಕೋರ್ಟ್ ಈ ಎಲ್ಲ ಆರೋಪಗಳನ್ನು ಕೈ ಬೀಡಲು ಆದೇಶಿಸಿತ್ತು.

ಇದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‍ಗೆ ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ವಕೀಲರಾದ ಹುಜೀಫಾ ಅಹ್ಮದಿ, ತೀಸ್ತಾ ಸೆತಲ್ವಾದ್ ವಾದಿಸಿದ್ದರು. ಆರೋಪಿ ಮೋಹನ್ ನಾಯಕ್, ಗೌರಿ ಲಂಕೇಶ್ ಹತ್ಯೆಯಲ್ಲಿ ಯೋಜನೆ ರೂಪಿಸಿ ನೇರ ಭಾಗಿಗಳಾಗಿದ್ದ ಅಮೋಲ್ ಕಾಳೆ ಮತ್ತು ರಾಜೇಶ್ ಬಂಗಾರರ ನಿಕಟವರ್ತಿಯಾಗಿದ್ದಾನೆ ಎಂದು ವಾದಿಸಿದ್ದರು. ಗೌರಿ ಲಂಕೇಶ್ ಅವರ ಹತ್ಯೆ ಸಾಮಾನ್ಯ ಕೊಲೆ ಅಲ್ಲ. ಒಂದು ಸಂಘಟಿತ ಮತ್ತು ಸೈದ್ಧಾಂತಿಕ ದ್ವೇಷದ ಕಾರಣಕ್ಕೆ ನಡೆಸಲಾದ ಹತ್ಯೆಯಾಗಿದೆ. ಕೋಕಾ ಕಾಯ್ದೆಯನ್ನು ಕೈಬಿಡುವುದರಿಂದ ಹತ್ಯೆಯ ಹಿಂದಿರುವ ಕಾಣದ ಕೈಗಳಿಗೆ ಶಿಕ್ಷೆಯಾಗುವುದಿಲ್ಲ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಿದ್ದರು. ಇದನ್ನೂ ಓದಿ: ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

ಪ್ರಕರಣದ ಚಾರ್ಜ್‍ಶೀಟ್ ಅನ್ನು ಹೈಕೋರ್ಟ್ ವಿಶ್ಲೇಷಿಸದೆ, ಪ್ರಕರಣವನ್ನು ರದ್ದುಗೊಳಿಸಿದೆ. ಈ ವಿಷಯವನ್ನು ಹೈಕೋರ್ಟ್ ಲಘುವಾಗಿ ಪರಿಗಣಿಸಿದೆ ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

ಜುಲೈ 13 ರಂದು ಹೈಕೋರ್ಟ್ ನ ನ್ಯಾ. ಹರೀಶ್ ಕುಮಾರ್‍ರವರ ಏಕ ಸದಸ್ಯ ಪೀಠ ಎಸ್‍ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರಕಾರ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿತ್ತು.

ಕೋಕಾ ಅಂದ್ರೆ ಏನು?:
ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ ಕ್ರೈಮ್ಸ್ ಆಕ್ಟ್). ಸಂಘಟಿತರಾಗಿ ಅಪರಾಧ ಕೃತ್ಯ ಎಸಗಿ, ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದು.

ಗೌರಿ ಹತ್ಯೆ ಪ್ರಕರಣವನ್ನು ನಡೆಸಿದ್ದ ವಿಶೇಷ ತನಿಖಾ ತಂಡ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಪ್ರಯೋಗಿಸಿತ್ತು. ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ 2019ರ ಪರೀಕ್ಷೆಯ ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆಯನ್ನು ಹಾಕಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *