ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ (Gathavaibhava Movie) ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಗೀತೆ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.
ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ ಸುನಿ (Simple Suni) ಕ್ಯಾಚಿ ಮ್ಯಾಚಿ ಪದ ಪೋಣಿಸಿದ್ದಾರೆ. ಅಭಿನಂದನ್ ಮಹಿಶಾಲೆ, ಸುನಿಧಿ ಗಣೇಶ್ ಕಂಠ ಕುಣಿಸಿದ್ದು, ಜೂಡಾ ಸ್ಯಾಂಡಿ ಸಂಗೀತದ ಇಂಪು ವರ್ಣಮಾಲೆ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ದುಶ್ಯಂತ್-ಆಶಿಕಾ ಹಳ್ಳಿ ಗೆಟಪ್ ನಲ್ಲಿ ಮಿಂಚಿದ್ದಾರೆ.
‘ಗತವೈಭವ’ ಫ್ಯಾಂಟಸಿ ಹಾಗೂ ಪುರಾಣದ ಕಥೆ ಜೊತೆಗೆ ರೋಮ್ಯಾಂಟಿಕ್ ಲವ್ ಸ್ಟೋರಿ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.