ಆಡಿಯೋ ಮತ್ತು ಟ್ರೇಲರ್‌ನೊಂದಿಗೆ ಪ್ರೇಕ್ಷಕರೆದುರು ಬಂದ ‘ಗರುಡಾಕ್ಷ’ ಚಿತ್ರತಂಡ

Public TV
2 Min Read

ಸಿನಿಮಾರಂಗ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೂ ಪ್ರಯತ್ನಗಳು, ಅದೃಷ್ಟ ಪರೀಕ್ಷೆಗಳು, ಕನಸು ಕಾಣೋದು ಇದ್ಯಾವುದು ನಿಲ್ಲೋದಿಲ್ಲ. ಅಂತಹದ್ದೊಂದು ಸೆಳೆತದ ಶಕ್ತಿ ಈ ಬಣ್ಣದ ಲೋಕಕ್ಕಿದೆ. ಎಲ್ಲೋ ಮೂಲೆಯಲ್ಲಿದ್ದವರನ್ನು ಒಮ್ಮೆಯಾದ್ರು ಈ ಗಾಂಧೀನಗರ ಕೈಬೀಸಿ ಕರೆಯದೇ ಇರೋದಿಲ್ಲ. ಹೀಗೆ ಆಕರ್ಷಿತರಾಗಿ ಒಂದೊಳ್ಳೆ ಪ್ರಯತ್ನ ಹಾಗೂ ಕನಸಿನೊಂದಿಗೆ ಬಂದಿರುವ ಬಹುತೇಕ ಹೊಸ ಪ್ರತಿಭೆಗಳೇ ತುಂಬಿರುವ ಚಿತ್ರತಂಡವೇ ಗರುಡಾಕ್ಷ. ಶ್ರೀಧರ್ ವೈಷ್ಣವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗರುಡಾಕ್ಷ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಹಿಡಿದು ಪ್ರೇಕ್ಷಕರೆದುರು ಬಂದು ನಿಂತಿದೆ.

ತೆರೆಗೆ ಬರಲು ಸಜ್ಜಾಗಿರುವ ಗರುಡಾಕ್ಷ ಚಿತ್ರತಂಡ ಚಿತ್ರದ ಟ್ರೇಲರ್ ಹಾಗೂ ಆಡಿಯೋವನ್ನು ಬಿಡುಗಡೆ ಮಾಡಿದೆ. ಟ್ರೇಲರ್ ನೋಡುಗರಿಗೆ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತೆ. ಚಿತ್ರದ ಹಾಡುಗಳು ಕೂಡ ಅಷ್ಟೇ ಭರವಸೆ ಮೂಡಿಸಿವೆ. ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾರ್ಥ, ಹಣ, ದುರಾಸೆ ಈ ಚಿತ್ರದ ಕಥಾವಸ್ತು. ಇದರ ಜೊತೆಗೆ ತಂದೆ ಮಗನ ಬಾಂಧವ್ಯದ ಎಳೆ ಹಾಗೂ ಥ್ರಿಲ್ಲಿಂಗ್ ಕಥಾನಕವೂ ಸಿನಿಮಾದಲ್ಲಿದೆ ಎನ್ನುತ್ತೆ ಚಿತ್ರತಂಡ. ಸಿನಿಮಾಗೆ ಸಂಬಂಧಿಸಿದ ಬಹುತೇಕ ಕೆಲಸ ಕಾರ್ಯಗಳು ಮುಗಿದಿದ್ದು, ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಕ್ಕೆ ಆರಂಭ ನೀಡಿದೆ ಗರುಡಾಕ್ಷ ಚಿತ್ರತಂಡ.

ಚೇತನ್ ಯದು ಚಿತ್ರದ ನಾಯಕ ನಟ. ಹಲವು ಧಾರಾವಾಹಿಗಳಲ್ಲಿ ಖಳನಟನಾಗಿ, ಸಹನಟ ಅಭಿನಯಿಸಿರುವ ಅನುಭವ ಇವರಿಗಿದೆ. ಆ ಅನುಭವವನ್ನೆಲ್ಲ ಒಟ್ಟುಗೂಡಿಸಿ ತೆರೆಯ ಮೇಲೆ ಚೊಚ್ಚಲ ಬಾರಿಗೆ ನಾಯಕ ನಟನಾಗಿ ಮಿಂಚಲು ಸಜ್ಜಾಗಿದ್ದಾರೆ ಚೇತನ್ ಯದು. ಇವರಿಗೆ ನಾಯಕಿಯಾಗಿ ರಕ್ಷಾ ತೆರೆ ಹಂಚಿಕೊಂಡಿದ್ದಾರೆ. ಸತ್ಯರಾಜ್, ರಫೀಕ್, ವಸಂತ ಕುಮಾರ್, ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ ಒಳಗೊಂಡಂತೆ ನವ ಕಲಾವಿದರ ದಂಡು ಚಿತ್ರದಲ್ಲಿದೆ. ಇದನ್ನೂ ಓದಿ: ಕರುನಾಡ ರತ್ನ ಅಪ್ಪು ದನಿಯಾಗಿದ್ದ ‘ಹರೀಶ ವಯಸ್ಸು 36’ ಚಿತ್ರದ ಹಾಡಿಗೆ ಸಿನಿರಸಿಕರ ಮೆಚ್ಚುಗೆ..!

ಕ್ಷೀರಪಥ ಮೂವೀಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು ಎಸ್. ನರಸಿಂಹ ಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀವತ್ಸ ಸಂಗೀತ ನಿರ್ದೇಶನ, ವೀರೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *