ಭಯೋತ್ಪಾದನ ದಾಳಿ ನಿಗ್ರಹಕ್ಕೆ ರಾಜ್ಯದಲ್ಲಿ ಸಿದ್ಧವಾಗಿದೆ ‘ಗರುಡ’ ಪಡೆ

Public TV
2 Min Read

ಬೆಂಗಳೂರು : ಇತ್ತೀಚೆಗೆ ಭಯೋತ್ಪಾದನ ದಾಳಿಗಳು ಜಾಸ್ತಿ ಆಗ್ತಾನೆ ಇವೆ. ಈ ಭಯೋತ್ಪಾದನ ದಾಳಿ ನಿಗ್ರಹಕ್ಕಾಗಿ ಕರ್ನಾಟಕದಲ್ಲಿ ವಿಶೇಷ ತಂಡ ರಚನೆಯಾಗಿದೆ. ಭಯೋತ್ಪಾದನೆ ದಾಳಿ ನಿಗ್ರಹಕ್ಕಾಗಿ ವಿಶೇಷವಾಗಿ ತರಬೇತಿ ಪಡೆದು ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಬೇಟೆ ಆಡುತ್ತೆ ಈ ಸಾಹಿಸಿಗಳ ತಂಡ. ಈ ವಿಶೇಷ ತಂಡದ ಹೆಸರೇ ಗರುಡ.

ಕರ್ನಾಟಕ ಪೊಲೀಸ್ ನ ಹೆಮ್ಮೆಯ ತಂಡ ಗರುಡ. ಭಯೋತ್ಪಾದನ ದಾಳಿಯ ನಿಗ್ರಹದ ಕಾರ್ಯಾಚರಣೆಗಾಗಿ ಪೊಲೀಸ್ ಆಂತರಿಕ ವಿಭಾಗದಲ್ಲಿ ವಿಶೇಷ ಶಸ್ತ್ರಸಜ್ಜಿತ ತರಬೇತಿ ಹೊಂದಿದೆ ಈ ಗರುಡ ಪಡೆ. 2010ರಲ್ಲಿ ಈ ಗರುಡ ಪಡೆ ಸ್ಥಾಪನೆ ಮಾಡಲಾಯ್ತು. ಬೆಂಗಳೂರು ಕೂಡ್ಲುವಿನಲ್ಲಿ ಕೇಂದ್ರ ಸ್ಥಾನ ಇದೆ. ದಿನದ 24 ಗಂಟೆಯು ತುರ್ತು ಕಾರ್ಯಾಚರಣೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸದಾ ಸನ್ನದ್ಧವಾಗಿರುತ್ತೆ ಈ ಗರುಡ ಪಡೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಗರುಡ ಪಡೆ ಮೊದಲ ಬಾರಿಗೆ ಅಣಕು ಪ್ರದರ್ಶನ ನಡೆಸಿತು. ಬಸ್ ಮೇಲೆ ಉಗ್ರರು ದಾಳಿ ಮಾಡಿದಾಗ ಉಗ್ರರನ್ನ ಸದೆಬಡಿದು ಪ್ರಯಾಣಿಕರ ರಕ್ಷಣೆ ಹೇಗೆ ಮಾಡುತ್ತೆ ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಿ, ತನ್ನ ತಾಕತ್ ಪ್ರದರ್ಶನ ಮಾಡಿತು.

ಈ ಗರುಡ ಪಡೆಯ ಇನ್ನೊಂದು ವಿಶೇಷ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನ. ಭಯೋತ್ಪಾದನಾ ನಿಗ್ರಹ, ನಕ್ಸಲ್ ನಿಗ್ರಹ ಪಡೆಯಲ್ಲಿ ಈ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನ ಪ್ರಮುಖ ಪಾತ್ರವಹಿಸುತ್ತೆ. ಮೂಲತಃ ಬೆಲ್ಜಿಯಂ ತಳಿಯ ಶ್ವಾನ ಇದು. ಸ್ವಾಭಾವಿಕವಾಗಿ ಅತೀ ಚುರುಕುತನ, ಅತೀ ಗ್ರಹಣ ಶಕ್ತಿ, ತೀಕ್ಷ್ಣ ಬುದ್ದಿವಂತಿಕೆ, 20-30 ಕಿಲೋಮೀಟರ್ ನಡೆಯುವ ಮತ್ತು ಓಡುವ ಸಾಮಥ್ರ್ಯ ಈ ಶ್ವಾನಕ್ಕೆ ಇದೆ. ಯಾವುದೇ ಆಹಾರ ಪದ್ದತಿ, ಯಾವುದೇ ವಾತಾವರಣಕ್ಕೆ ಈ ಶ್ವಾನ ಹೊಂದಿಕೊಳ್ಳುತ್ತೆ.

ಸದ್ಯ ಬೆಂಗಳೂರಿನಲ್ಲಿ 4 ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಬೆಂಗಳೂರಿನ ತರಳು ಗ್ರಾಮದಲ್ಲಿರುವ ಸಿ.ಆರ್.ಪಿ.ಎಫ್ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. 10 ತಿಂಗಳು ಕಾಲ ಶಿಸ್ತು ಕಲಿಸುವಿಕೆ, ಟ್ರಾಕಿಂಗ್, ಗುರುತು ಪತ್ತೆ, ಆಕ್ರಮಣದ ತರಬೇತಿ ಐಇಡಿ ಪತ್ತೆ ಹಚ್ಚುವ ತರಬೇತಿ ನೀಡಲಾಗುತ್ತದೆ. ತರಬೇತಿ ನೀಡದ ಬಳಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಈ ಶ್ವಾನಗಳನ್ನ ಬಳಸಿಕೊಳ್ಳಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *