‘ಗಂಟುಮೂಟೆ’ ನೋಡಿ ರಕ್ಷಿತ್ ಶೆಟ್ಟಿ ಹೇಳಿದ್ದೇನು?

Public TV
1 Min Read

ಬೆಂಗಳೂರು: ರೂಪಾ ರಾವ್ ನಿರ್ದೇಶನದ ಚೊಚ್ಚಲ ಚಿತ್ರವಾದ ಗಂಟುಮೂಟೆಯೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಬಾಯಿಂದ ಬಾಯಿಗೆ ಹರಡಿಕೊಂಡ ಸದಾಭಿಪ್ರಾಯಗಳೇ ಹೊಸಬರ ಹೊಸಾ ಪ್ರಯತ್ನವಾಗಿ ಮೂಡಿ ಬಂದಿರೋ ಈ ಚಿತ್ರ ಮ್ಯಾಜಿಕ್ಕು ಮಾಡಲು ಪ್ರೇರೇಪಣೆ ನೀಡಿದೆ. ಇದೀಗ ಎಲ್ಲೆಡೆ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರದತ್ತ ನಟ ನಟಿಯರೂ ಚಿತ್ರ ಹರಿಸುತ್ತಿದ್ದಾರೆ. ಸದ್ಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗಂಟುಮೂಟೆಯನ್ನು ಕಣ್ತುಂಬಿಕೊಂಡಿದ್ದಾರೆ. ಒಂದು ಅಪರೂಪದ ಮಹಿಳಾ ಪ್ರಧಾನ ಚಿತ್ರವನ್ನು ನೋಡಿದ ಖುಷಿ ಅನುಭವಿಸಿರೋ ರಕ್ಷಿತ್ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಗಂಟುಮೂಟೆ ಅತ್ಯಂತ ವಿರಳ ಕಥಾ ಹಂದರದ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡಿರುವ ಚಿತ್ರ. ಇದು ನಮಗೆ ಅಪರಿಚಿತ ಎನ್ನಬಹುದಾದ ಜಗತ್ತನ್ನ ನಮ್ಮೆದುರು ಬಿಚ್ಚಿಡುವ ಪರಿಯೇ ಅಚ್ಚರಿಯಂಥಾದ್ದು. ಗಂಟುಮೂಟೆ ಅಭಿವ್ಯಕ್ತಗೊಳಿಸಲು ಅಸಾಧ್ಯವಾದಂಥಾ ಅಂಶಗಳ ಮೂಲಕ ಅದ್ಭುತ ಕವಿತೆಯಂತೆಯೇ ರೂಪುಗೊಂಡಿದೆ. ಇದರೊಳಗಿನ ಪ್ರತೀ ಪಾತ್ರಗಳೂ ಅದ್ಭುತ ಲೋಕದೊಳಗೆ ಕರೆದೊಯ್ಯುತ್ತದೆ. ಇದು ನೀವೆಲ್ಲ ನೋಡಲೇ ಬೇಕಾದ ಚಿತ್ರ’ ಎಂದು ರಕ್ಷಿತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ರಕ್ಷಿತ್ ಶೆಟ್ಟಿ ಭಿನ್ನ ಅಭಿರುಚಿ ಹೊಂದಿರುವ ನಟ. ಅವರೊಳಗೊಬ್ಬ ಅದೇ ನೆಲೆಯ ನಿರ್ದೇಶಕನಿದ್ದಾನೆ. ಅಂಥಾ ರಕ್ಷಿತ್ ಶೆಟ್ಟಿಯವರೇ ಗಂಟುಮೂಟೆಯನ್ನು ನೋಡಿ ಬೆರಗಾಗಿದ್ದಾರೆಂದರೆ ಈ ಸಿನಿಮಾದ ನಿಜವಾದ ಕಸುವೇನೆಂಬುದು ಯಾರಿಗಾದರೂ ಅರ್ಥವಾಗದಿರೋದಿಲ್ಲ. ಇದೀಗ ಅವನೇ ಶ್ರೀಮನ್ನಾರಾಯಣ ಚಿತ್ರದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿರೋ ರಕ್ಷಿತ್, ಅದರ ನಡುವೆಯೂ ಈ ಚಿತ್ರವನ್ನು ನೋಡಿ ಖುಷಿಗೊಂಡಿದ್ದಾರೆ. ಗಂಟುಮೂಟೆ ನೋಡಿದ ಪ್ರತೀ ಪ್ರೇಕ್ಷಕರೂ ಕೂಡಾ ಇದೇ ರೀತಿ ಥ್ರಿಲ್ ಆಗಿದ್ದಾರೆ. ನಿರ್ದೇಶಕಿ ರೂಪಾ ರಾವ್ ಈ ಚಿತ್ರವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತೂ ಈ ಸಿನಿಮಾ ಅಪರೂಪದ ಕಥನದೊಂದಿಗೆ ಅಚ್ಚರಿದಾಯಕ ಗೆಲುವನ್ನು ತನ್ನದಾಗಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *