ಕೊಪ್ಪಳ: ಗಂಗಾವತಿ (Gangavathi) ನಗರದ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೊಪ್ಪಳದ (Koppal) ಗಂಗಾವತಿ ನಗರದ ರಾಯಚೂರು ರಸ್ತೆಯ ವಿದ್ಯಾನಗರದ ಗೌರಿಶಂಕರ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಲ್ ಅಕ್ಕಿಯನ್ನು 2022ರಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಸರ್ಕಾರಿ ಗೋದಾಮಿ ನಲ್ಲಿಟ್ಟಿದ್ದರು. ಸಂಬಂಧಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಇದನ್ನೂ ಓದಿ: ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?
ಆರೋಪಿಗಳು ಕೋರ್ಟ್ ಮೊರೆ ಹೋಗಿ, ‘ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾದ ಮಂಡಿಸಿದ್ದರಿಂದ ಇದೇ ವರ್ಷ ಜಿಲ್ಲಾಧಿಕಾರಿ ಆರೋಪಿಗಳಿಗೆ ಅಕ್ಕಿ ವಾಪಸ್ ನೀಡುವಂತೆ ಆದೇಶ ಹೊರಡಿಸಿದ್ದರು. ಜಪ್ತಿ ಮಾಡಿದ್ದ 168 ಕ್ವಿಂಟಲ್ ಅಕ್ಕಿಯನ್ನು ರೈಸ್‌ಮಿಲ್‌ನವರು ವಾಪಸ್ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ ಹಾಗೂ ಇತರರು 275ಕ್ಕೂ ಹೆಚ್ಚು ಕ್ವಿಂಟಲ್‌ನಷ್ಟು ಅಕ್ಕಿ ಸಾಗಾಣಿಕೆಗೆ ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಾಹಿತಿ ತಿಳಿದ ಸಂಘಟನೆಗಳ ಮುಖಂಡರು ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ಬಾಬು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇವೆಲ್ಲವೂ 9.10 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಎನ್ನುವ ಮಾಹಿತಿ ಗೊತ್ತಾಗಿದೆ.
ಈ ಕುರಿತು ಇಲ್ಲಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್ ಸುಹಾಸ್ ಯರೇಶೀಮಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗೋದಾಮು ವ್ಯವಸ್ಥಾಪಕ ಸೋಮಶೇಖರ ಬುಡ್ಡನವರ, ವಿದ್ಯಾನಗರದ ಉಮಾಶಂಕರ ರೈಸ್‌ಮಿಲ್ ಮಾಲೀಕ, ಲಾರಿ ಮಾಲೀಕ ಮತ್ತು ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ