ಗಣೇಶನ ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ರಸ್ತೆ ಗುಂಡಿ ಮುಚ್ಚಿದ ಯುವಕರು

Public TV
1 Min Read

ಚಿಕ್ಕಬಳ್ಳಾಪುರ: ಗಣೇಶೋತ್ಸವನ್ನು ವಿಭಿನ್ನವಾಗಿ ಆಚರಿಸಬೇಕೆಂದು ಎಲ್ಲ ಯುವಕರು ಭಾರೀ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದಕ್ಕಾಗಿ ಹಣ ಸಂಗ್ರಹಿಸಿ ಗಣೇಶೋತ್ಸವ ಆಚರಿಸುತ್ತಾರೆ. ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ಯುವಕರು ಇತರರಿಗಿಂತ ವಿಭಿನ್ನವಾಗಿ ಹಬ್ಬ ಆಚರಿಸಿದ್ದು, ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.

ಗುಂಡಿ ಬಿದ್ದಿರುವ ರಸ್ತೆಗೆ ಯುವಕರೇ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ತಮ್ಮೂರಲ್ಲಿ ಗಣೇಶನನ್ನು ಕೂರಿಸಬೇಕಂತ ಒಟ್ಟುಗೂಡಿದ ಯುವಕರು ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಿದ್ದರ. ಗಣೇಶನ ಹೆಸರಲ್ಲಿ ವಸೂಲಿ ಮಾಡಿದ್ದ ಹಣವನ್ನು ತಮ್ಮೂರಿಗೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯ ಗುಂಡಿಗಳನ್ನು ಮುಚ್ಚಲು ಬಳಸಿಕೊಳ್ಳುವ ಮೂಲಕ ದೇವರ ಸೇವೆಯನ್ನು ಈ ರೀತಿಯಾಗಿಯೂ ಮಾಡಬಹುದು, ಸಮಾಜ ಸೇವೆಯೇ ದೇವರ ಸೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದರು. ಹೀಗಾಗಿ ಇದಕ್ಕೆ ಏನಾದರೂ ಮಾಡಬೇಕು ಎಂದು ವಿಭಿನ್ನ ಆಲೋಚನೆ ಮಾಡಿದ ಯುವಕರು ಈ ಕೆಲಸ ಮಾಡಿದ್ದಾರೆ. ಈ ಮೂಲಕ ಸರ್ಕಾರ ಮಾಡಬೇಕಾದ ಕೆಲಸವನ್ನು ಗ್ರಾಮದ ಯುವಕರೇ ಮಾಡಿದ್ದರಿಂದ ಗ್ರಾಮಸ್ಥರು ಸಹ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವಕರು ಪ್ರತಿವರ್ಷ ಗ್ರಾಮದ ಮೂರು ಕಡೆ ಗಣೇಶನನ್ನು ಕೂರಿಸಿ ಪಂಗಡಗಳಾಗಿ ಹಂಚಿ ಹೋಗಿದ್ದ ಈ ಯುವಕರು ಈ ಬಾರಿ ಒಗ್ಗಾಟ್ಟಾಗಿದ್ದಾರೆ. ಬೀದಿಗೊಂದು ಗಣೇಶ ಬೇಡ, ಊರಿಗೊಂದೇ ಗಣೇಶ ಸಾಕು ಎಂದು ಒಂದೇ ಗಣೇಶ ಕೂರಿಸಿದ್ದಾರೆ. ಇನ್ನೆರಡು ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಕಲೆಕ್ಷನ್ ಮಾಡಿದ ಹಣದಲ್ಲಿ ತಮ್ಮೂರಿನ ಮುಖ್ಯರಸ್ತೆಯಲ್ಲಿದ್ದ ಗುಂಡಿಗಳನ್ನ ಮುಚ್ಚೋಕೆ ಬಳಕೆ ಮಾಡಿ ಮಾದರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *