ಗಣೇಶ ಮೋದಕ ಪ್ರಿಯ ಯಾಕೆ?

Public TV
2 Min Read

ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ.

ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಬಹುತೇಕ ಎಲ್ಲರೂ ತಿಂಡಿಗಳನ್ನು ತಯಾರಿಸಿ ನೈವೇದ್ಯ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಹಣ್ಣು ಕಾಯಿಯನ್ನೂ ನೈವೇದ್ಯ ಮಾಡುವುದು ಪದ್ಧತಿ. ಗಣೇಶನಿಗೆ ಪ್ರಿಯವಾದ ಮೋದಕ, ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಆದರೆ ಗಣೇಶ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ ಮೋದಕವನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಅಷ್ಟೇ ಅಲ್ಲದೆ ಗಣೇಶನನ್ನು ಮೋದಕ ಎಂದು ಕೂಡ ಕರೆಯುತ್ತಾರೆ. ಇದನ್ನೂ ಓದಿ: ಗಣೇಶನಿಗಾಗಿ ಪಂಚಕಜ್ಜಾಯ ಪ್ರಸಾದ

ಮೋದಕ ನೈವೇದ್ಯದ ಹಿನ್ನೆಲೆ:
ಪಾರ್ವತಿ ದೇವಿ ಗಣೇಶನ ಜನ್ಮದಿನದಂದು ಮಗನಿಗೆ ಮೋದಕವನ್ನು ಮಾಡಿ ಉಣಬಡಿಸುತ್ತಿದ್ದಳು. ಅದಕ್ಕಾಗಿ ಗಣೇಶ ಚತುರ್ಥಿಯಂದು ಮೋದಕವನ್ನು ಮನೆಗಳಲ್ಲಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದು ಪದ್ಧತಿಯಾಗಿದೆ. ಚೌತಿಯ ದಿನ ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಮಾಡದಿದ್ದರೆ ಹಬ್ಬವೇ ಅಪೂರ್ಣ ಆದ್ದಂತೆ. ಹಾಗಾಗಿ ಗಣೇಶ ಹಬ್ಬದಂದು ಮೋದಕವನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.

ಇನ್ನೊಂದು ಕಥೆಯೆಂದರೆ ಒಮ್ಮೆ ದೇವಾನುದೇವತೆಗಳು ಶಿವ-ಪಾರ್ವತಿ ಮನೆಗೆ ಹೋಗಿರುತ್ತಾರೆ. ಆಗ ವಿಶಿಷ್ಟ ಪರಿಮಳ ಮತ್ತು ತುಂಬಾ ರುಚಿಯಾಗಿರುವ ಮೋದಕವನ್ನು ತರುತ್ತಾರೆ. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆಯಾಗಿತ್ತು.


ಆಗ ಒಂದೇ ಒಂದು ಮೋದಕ ಇತ್ತು. ಪಾರ್ವತಿ ಗಣೇಶ ಮತ್ತು ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂದು ಗೊಂದಲಕ್ಕೊಳಗಾಗಿದ್ದಳು. ಕೊನೆಗೆ ಮಕ್ಕಳಿಬ್ಬರನ್ನು ಕರೆದು, ನಿಮ್ಮಿಬ್ಬರಲ್ಲಿ ಯಾರಲ್ಲಿ ನಿಜವಾದ ಶ್ರದ್ಧೆ, ಭಕ್ತಿ ಇದೆಯೆಂದು ಸಾಧಿಸಿ ತೋರಿಸುವಿರೋ ಅವರಿಗೆ ಮೋದಕ ಸಿಗುತ್ತದೆ ಎಂದು ಹೇಳುತ್ತಾಳೆ.

ತಕ್ಷಣ ಕಾರ್ತಿಕ ತನ್ನ ವಾಹನ ಏರಿ ಆಧ್ಯಾತ್ಮ ಮತ್ತು ಭಕ್ತಿ ಕ್ಷೇತ್ರಗಳನ್ನು ಹುಡುಕುತ್ತಾ ಹೊರಡುತ್ತಾನೆ. ಆದರೆ ಗಣೇಶ ಮಾತ್ರ ಶಿವ-ಪಾರ್ವತಿಯರ ಹತ್ತಿರವೇ ಇದ್ದುಬಿಡುತ್ತಾನೆ. ತಂದೆ ತಾಯಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಶ್ರದ್ಧೆ, ಭಕ್ತಿ ಯಾವುದೇ ಪವಿತ್ರ ಸ್ಥಳಗಳನ್ನು ಭೇಟಿ ಮಾಡುವುದರಿಂದ ಸಿಗುವುದಿಲ್ಲ ಎಂದು ಹೇಳುತ್ತಾನೆ. ಇದರಿಂದ ಪ್ರಭಾವಿತಳಾದ ಪಾರ್ವತಿ ಮೋದಕವನ್ನು ಗಣೇಶನಿಗೆ ನೀಡುತ್ತಾಳೆ. ಅಂದಿನಿಂದ ಗಣೇಶ ಹಬ್ಬಕ್ಕೆ ಮೋದಕ ನೈವೇದ್ಯ ಮಾಡುವುದು ಚಾಲ್ತಿಗೆ ಬಂದಿದೆ.

ಒಮ್ಮೆ ಕುಬೇರ ತನ್ನ ಸಂಪತ್ತು ತೋರ್ಪಡಿಸಲು ಸರ್ವದೇವತಗೆಗಳನ್ನು ಬೋಜನಕೂಟಕ್ಕೆ ಆಹ್ವಾನಿಸುತ್ತಾನೆ. ಪರಮೇಶ್ವರನ ಅನುಪಸ್ಥಿತಿಯಲ್ಲಿ ಗಣೇಶ ಊಟಕ್ಕೆ ತೆರಳುತ್ತಾನೆ. ಆದರೆ ಗಣೇಶನ ಹೊಟ್ಟೆ ತುಂಬಲ್ಲ. ಕುಬೇರನ ಆಹಾರ ದಾಸ್ತಾನು ಖಾಲಿಯಾದರೂ ಗಣೇಶನ ಹೊಟ್ಟೆ ತುಂಬಲ್ಲ. ಕೊನೆಗೆ ತನ್ನನ್ನು ಕಾಪಾಡಬೇಕೆಂದು ಪರಮೇಶ್ವರನ ಬಳಿ ಬರುತ್ತಾನೆ. ಹೊಟ್ಟೆ ಹಸಿದುಕೊಂಡಿದ್ದ ಗಣೇಶನಿಗೆ ತಾಯಿ ಪಾರ್ವತಿ ರುಚಿಯಾದ ಮೋದಕ ನೀಡುತ್ತಾಳೆ. ಮೋದಕ ತಿಂದ ಕೂಡಲೇ ಗಣೇಶನ ಹೊಟ್ಟೆ ತುಂಬುತ್ತದೆ. ಹಾಗಾಗಿ ಗಣೇಶ ಮೋದಕ ಪ್ರಿಯನಾದ ಎಂಬುವುದು ಮತ್ತೊಂದು ಕಥೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *