ಗಣೇಶನಿಗೆ ಅರ್ಪಿಸುವ ಹಲವಾರು ಭಕ್ಷ್ಯಗಳಲ್ಲಿ ಪ್ರಮುಖವಾದುದು ಮೋದಕ. ಇದು ಗಣಪನಿಗೆ ಬಹಳ ಅಚ್ಚುಮೆಚ್ಚು. ಈ ಮೋದಕವನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಮೋದಕ ಮಾಡೋದನ್ನ ಹೇಗೆ ಎಂದು ಇವತ್ತು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು
1 ಕಪ್ ಅಕ್ಕಿ ಹಿಟ್ಟು,
1 1/4 ಕಪ್ ನೀರು
1 ಟೀಸ್ಪೂನ್ ತುಪ್ಪ. ಬೇಕಾದರೆ ತುಪ್ಪದ ಬದಲಿಗೆ ತೆಂಗಿನ ಎಣ್ಣೆಯನ್ನೂ ಬಳಸಬಹುದು.
ಚಿಟಿಕೆ ಉಪ್ಪು
1 ಕಪ್ ತುರಿದ ತೆಂಗಿನಕಾಯಿ
3/4 ಕಪ್ ಬೆಲ್ಲ
1/2 ಟೀಸ್ಪೂನ್ ಏಲಕ್ಕಿ ಪುಡಿ
1 ಟೀಸ್ಪೂನ್ ಗಸಗಸೆ ಬೀಜ
ಒಂದು ಸ್ಟೀಮರ್,
ಹೂರಣ ತಯಾರಿಸೋದು ಹೇಗೆ?
ಮೊದಲು ಮೋದಕದ ಒಳಗೆ ತುಂಬಿಸಲಾಗುವ ಹೂರಣವನ್ನು ತಯಾರಿಸಬೇಕು. ಒಂದು ಪ್ಯಾನ್‌ನಲ್ಲಿ, ತುರಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ ಮತ್ತು ಅವು ಮಿಶ್ರಣ ಆಗುವವರೆಗೆ ಬೆರೆಸಿ. ಈಗ ಏಲಕ್ಕಿ ಪುಡಿ ಮತ್ತು ಗಸಗಸೆ ಬೀಜಗಳನ್ನು ಸೇರಿಸಿ ಮತ್ತು ಮಿಶ್ರಣ ದಪ್ಪವಾಗುವವರೆಗೆ ಬೇಯಿಸಬೇಕು. ನಂತರ ತಣ್ಣಗಾಗಲು ಬಿಡಬೇಕು.
ಮೋದಕ ತಯಾರಿಸೋದು ಹೇಗೆ?
ಮೊದಲು ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ಸೇರಿಸಿ, ಹಿಟ್ಟಿನ ಸಣ್ಣ ಉಂಡೆಯನ್ನು ತೆಗೆದುಕೊಂಡು ರೋಲಿಂಗ್ ಪಿನ್ ಅಥವಾ ನಿಮ್ಮ ಅಂಗೈಗಳ ಸಹಾಯದಿಂದ ಸುತ್ತಿಕೊಳ್ಳಬೇಕು. ಬಳಿಕ 1 ರಿಂದ 2 ಚಮಚ ಹೂರಣವನ್ನು ಸೇರಿಸಿ ಮೋದಕದ ಆಕಾರಕ್ಕೆ ಮಾಡಬೇಕು. ಬಳಿಕ ಅವುಗಳನ್ನು ಬಾಳೆ ಎಲೆಯಲ್ಲಿ ಇರಿಸಿ, 10 ನಿಮಿಷಗಳ ಕಾಲ ಸ್ಟೀಮ್‌ನಲ್ಲಿ ಬೇಯಿಸಬೇಕು. ಈಗ ಗಣಪನಿಗೆ ಇಷ್ಟವಾದ ಮೋದಕ ನಿಮ್ಮ ಮುಂದೆ ಸಿದ್ಧ.