ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಮೂಡಿದ ಗಣಪ

Public TV
1 Min Read

ಕೊಪ್ಪಳ: ಪಿಒಪಿ ಗಣೇಶ ಮೂರ್ತಿಯಿಂದ ಪರಿಸರಕ್ಕೆ ಹಾನಿ ಅಂತಾ ಎಲ್ಲರಿಗೂ ಗೊತ್ತು. ಆದರೂ ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಆದರೆ ಇಲ್ಲೊಬ್ಬ ಶಿಕ್ಷಕರು ವಿಶೇಷವಾದ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬನ್ನಿಕೊಪ್ಪ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ತೊಂಟದಾರ್ಯ ಯುವಕ ಹಾಗೂ ಮಾರುತಿ ಯುವಕ ಮಂಡಳಿಗಳ ಸಹಕಾರದಿಂದ ಶಾಂತವೀರಸ್ವಾಮಿ ಶಿಕ್ಷಕ ಸಾರ್ವಜನಿಕ ಪರಿಸರ ಸ್ನೇಹಿ ಗಣೇಶನನ್ನು ನಿರ್ಮಿಸಿ ಪರಿಸರ ಕಾಳಜಿ ಮೆರೆದಿದ್ದಾರೆ.

ಇವರು ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದು, ಈ ಬಾರಿ ಒಂದು ಸಾವಿರದ ಒಂದು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಬಳಸಿ ಗಣೇಶನನ್ನು ನಿರ್ಮಿಸಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಮುಂದಾಗಿದ್ದಾರೆ. ಕೇವಲ ನಾಲ್ಕು ಗಂಟೆಯಲ್ಲಿ ಈ ಗಣೇಶನನ್ನು ನಿರ್ಮಿಸಿದ್ದಾರೆ.

ಈ ಪ್ಲಾಸ್ಟಿಕ್ ಬಾಟಲಿ ಬಳಸಿ ಗಣೇಶನನ್ನು ನಿರ್ಮಿಸಲು ಗ್ರಾಮದ ಯುವಕರು ಸಹಕರಿಸಿದ್ದಾರೆ. ಇತ್ತೀಚೆಗೆ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ಜಾಸ್ತಿ ಆಗಿದ್ದು, ಅದನ್ನೇ ಬಳಸಿ ಗಣೇಶನನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮತ್ತೆ ಗಣೇಶನ ವಿಸರ್ಜನೆ ಮಾಡುವ ಸಮಯದಲ್ಲಿ ಈ ಎಲ್ಲಾ ಬಾಟಲಿಗಳನ್ನು ಮರು ಬಳಕೆಗೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಅದೇ ಪಿಒಪಿ ಗಣೇಶನ ಬಳಕೆಯಿಂದಾಗಿ ಪರಿಸರ ಮಾಲಿನ್ಯದ ಜೊತೆಗೆ ಕೆರೆಗಳು ಹೂಳು ತುಂಬುತ್ತವೆ. ಅದರಿಂದ ನಮಗೆ ಹಾನಿ ಆಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ಗಣೇಶನಿಗೆ ಮಾರು ಹೋಗಿದ್ದೇವೆ ಎಂದು ಸ್ಥಳೀಯ ನಿವಾಸಿ ಕಿರಣ್ ಹೇಳಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಪಿಒಪಿ ಗಣೇಶನ ಅಬ್ಬರದ ಮಧ್ಯೆಯೇ ಹೀಗೆ ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆ ಮಾಡುತ್ತಾ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಶಿಕ್ಷಕ ಶಾಂತವೀರಸ್ವಾಮಿ ಅವರು ಯಶಸ್ವಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *