70 ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ

2 Min Read

ನವದೆಹಲಿ: 77ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 70 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು (Gallantry Awards) ಅನುಮೋದಿಸಿದ್ದಾರೆ.

ಇದರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ನೀಡಲಾದ ಅಶೋಕ ಚಕ್ರವೂ ಸೇರಿದೆ. ಇದನ್ನೂ ಓದಿ: ಮೈಸೂರು ಮೂಲದ ಎಂ.ಪುಟ್ಟಮಾದಯ್ಯ ಸೇರಿ ಐವರು ಐಪಿಎಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

ಕಳೆದ ವರ್ಷ ಜೂನ್‌ನಲ್ಲಿ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಮತ್ತು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1984 ರಲ್ಲಿ ಗಗನಯಾತ್ರಿ ರಾಕೇಶ್ ಶರ್ಮಾ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಹಾರಿದ 41 ವರ್ಷಗಳ ನಂತರ ಶುಕ್ಲಾ ಈ ಸಾಧನೆ ಮಾಡಿದರು. 18 ದಿನಗಳ ಬಾಹ್ಯಾಕಾಶ ಪ್ರಯಾಣ ನಡೆಯಿತು.

ಅನುಭವಿ ಫೈಟರ್ ಪೈಲಟ್ ಆಗಿರುವ ಶುಕ್ಲಾ, ಸು-30 ಎಂಕೆಐ, ಮಿಗ್-21, ಮಿಗ್-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು ಆನ್-32 ಸೇರಿದಂತೆ ವಿವಿಧ ವಿಮಾನಗಳಲ್ಲಿ 2,000 ಕ್ಕೂ ಹೆಚ್ಚು ಗಂಟೆಗಳ ಹಾರಾಟ ನಡೆಸಿದ್ದಾರೆ.

ರಾಷ್ಟ್ರಪತಿ ಮುರ್ಮು ಅವರು 70 ಸಿಬ್ಬಂದಿಗೆ ಅನುಮೋದಿಸಿದ ಶೌರ್ಯ ಪ್ರಶಸ್ತಿಗಳಲ್ಲಿ ಮೂರು ಕೀರ್ತಿ ಚಕ್ರಗಳು, ಒಂದು ಮರಣೋತ್ತರ ಪ್ರಶಸ್ತಿ ಸೇರಿದಂತೆ 13 ಶೌರ್ಯ ಚಕ್ರಗಳು, ಒಂದು ಸೇನಾ ಪದಕ (ಶೌರ್ಯ) ಮತ್ತು 44 ಸೇನಾ ಪದಕಗಳು (ಶೌರ್ಯ) ಸೇರಿವೆ. ಇದನ್ನೂ ಓದಿ: ಬಾಹ್ಯಾಕಾಶಕ್ಕೆ ತೆರಳಿದ್ದ ಸ್ಪೇಸ್‌ ಹೀರೋ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ

ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಮೇಜರ್ ಅರ್ಷದೀಪ್ ಸಿಂಗ್, ನೈಬ್ ಸುಬೇದಾರ್ ದೋಲೇಶ್ವರ ಸುಬ್ಬಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರಿಗೆ ನೀಡಲಾಯಿತು.

ಸಶಸ್ತ್ರ ಪಡೆಗಳು ಮತ್ತು ಇತರ ಸಿಬ್ಬಂದಿಗೆ 301 ಮಿಲಿಟರಿ ಪ್ರಶಸ್ತಿಗಳನ್ನು ನೀಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಇವುಗಳಲ್ಲಿ 30 ಪರಮ ವಿಶಿಷ್ಟ ಸೇವಾ ಪದಕಗಳು, ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 56 ಅತಿ ವಿಶಿಷ್ಟ ಸೇವಾ ಪದಕಗಳು, ಒಂಬತ್ತು ಯುದ್ಧ ಸೇವಾ ಪದಕಗಳು, ಎರಡು ಸೇನಾ ಪದಕ (ವಿಶಿಷ್ಟ), 43 ಸೇನಾ ಪದಕಗಳು (ವಿಶಿಷ್ಟ), ಎಂಟು ನವೋ ಸೇನಾ ಪದಕಗಳು (ವಿಶಿಷ್ಟ), 14 ವಾಯು ಸೇನಾ ಪದಕಗಳು (ವಿಶಿಷ್ಟ), ಮತ್ತು 135 ವಿಶಿಷ್ಟ ಸೇವಾ ಪದಕಗಳು ಸೇರಿವೆ.

Share This Article