‘ಗಾಳಿಪಟ 2 ‘ ನನ್ನ ವೃತ್ತಿ ಜೀವನದ ಮಹತ್ವದ ಸಿನಿಮಾ ಆಗಿದೆ : ಶ್ವೇತಾ ಪಾತ್ರಧಾರಿ ವೈಭವಿ ಶಾಂಡಿಲ್ಯ

Public TV
3 Min Read

ಗಾಳಿಪಟ 2 ಚಿತ್ರದಲ್ಲಿ ಅನಂತ್ ನಾಗ್, ಗಣೇಶ್, ದಿಗಂತ್, ರಂಗಾಯಣ ರಘು ಮುಂತಾದ ಪ್ರತಿಭಾವಂತ ಕಲಾವಿದರ ನಡುವೆ ಗಮನ ಸೆಳಯುವ ಇನ್ನೊಬ್ಬರೆಂದರೆ, ಅದು ಶ್ವೇತಾ ಪಾತ್ರಧಾರಿ ವೈಭವಿ ಶಾಂಡಿಲ್ಯ. ಗಣೇಶ್ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಮೂಲತಃ ಮರಾಠಿಯವರು. ಈಗಾಗಲೇ ಕೆಲವು ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ವೈಭವಿ, ಕೆಲವು ವರ್ಷಗಳ ಹಿಂದೆ ‘ರಾಜ್-ವಿಷ್ಣು’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಗಾಳಿಪಟ 2 (Gaalipata 2) ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿನಯ ಮತ್ತು ಚೆಲುವಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.

ಶ್ವೇತಾ (Shweta)ಪಾತ್ರ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದ ಪಾತ್ರ ಎನ್ನುವ ವೈಭವಿ (Vaibhavi Shandilya), ‘ನಾನು ನಿಜಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಎಮೋಷನಲ್ ಆಗಿ ಇರುವಂತಹ ಪಾತ್ರ ನನ್ನದು. ಹಾಗಾಗಿ, ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು. ಆದರೆ, ಇಡೀ ಚಿತ್ರತಂಡದ ಸಹಾಯದೊಂದಿಗೆ ಆ ಪಾತ್ರ ನಿರ್ವಹಿಸಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದಾಗಿತ್ತು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ನಟಿಸಿದ್ದು ಫಲ ನೀಡಿದೆ. ಜನರ ಪ್ರೀತಿ ನೋಡಿದಾಗ ಬಹಳ ಖುಷಿಯಾಗುತ್ತದೆ’ ಎನ್ನುತ್ತಾರೆ ವೈಭವಿ.

ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅಭಿನಯವನ್ನು ಜನ ಗುರುತಿಸಿ ಮಾತನಾಡುವಾಗ ಹೃದಯ ತುಂಬಿ ಬರುತ್ತದೆ ಎನ್ನುವ ವೈಭವಿ, ‘ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ಗಾಳಿಪಟ 2 ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದರು. ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ, ನನ್ನನ್ನು ಗಾಳಿಪಟ 2 ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ. ಇದನ್ನೂ ಓದಿ:ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

ಸದ್ಯ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ವೈಭವಿ, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘’ಮಾರ್ಟಿನ್’ (Martin)ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ. ಅದು ಇನ್ನೊಂದು ಅದ್ಭುತವಾದ ಅನುಭವ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾದ ಪಾತ್ರ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾನಿಸಿಕೊಂಡಿದ್ದೇನೆ’ ಎನ್ನುತ್ತಾರೆ ವೈಭವಿ.

ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟ ಎನ್ನುವ ವೈಭವಿ, ‘ಯಾವುದೋ ಒಂದು ತರಹದ ಪಾತ್ರಕ್ಕೆ ನನಗೆ ಸೀಮಿತವಾಗುವುದಕ್ಕೆ ಇಷ್ಟವಿಲ್ಲ. ನನಗೆ ಡ್ರಗ್ ಅಡಿಕ್ಟ್ ಆಗಿ ನಟಿಸುವಾಸೆ. ಹಾರರ್ ಚಿತ್ರದಲ್ಲಿ ನಟಿಸುವಾಸೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವಾಸೆ. ಸೂಕ್ಷ್ಮಸಂವೇದನೆಯ ಚಿತ್ರಗಳ ಜೊತೆಗೆ ರಾಜಮೌಳಿ ಅವರ ಶೈಲಿಯ ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳಲ್ಲೂ ನಟಿಸುವುದಕ್ಕೆ ಆಸೆ ಇದೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ’ ಎನ್ನುವ ವೈಭವಿ, ಸದ್ಯಕ್ಕೆ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲವಂತೆ.

‘ಸದ್ಯ ಹಲವು ಆಫರ್ಗಳಿವೆ. ಹಲವು ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ, ಯಾವುದನ್ನೂ ಓಕೆ ಮಾಡಿಲ್ಲ. ಎಂತಹ ಪಾತ್ರಗಳನ್ನು ಬೇಕಾದರೂ ಮಾಡಬಲ್ಲೆ ಎಂದು ತೋರಿಸಬೇಕು. ನಾನೊಬ್ಬ ವರ್ಸಟೈಲ್ ನಟಿ ಎಂದು ನಿರೂಪಿಸಬೇಕು. ಹಾಗಾಗಿ, ಅಂತಹ ಪಾತ್ರಗಳ ಆಯ್ಕೆ ಮತ್ತು ಹುಡುಕಾಟದಲ್ಲಿದ್ದೇನೆ. ಸದ್ಯದಲ್ಲೇ ಒಂದೊಳ್ಳೆಯ ಸುದ್ದಿ ಕೊಡುತ್ತೇನೆ’ ಎನ್ನುತ್ತಾರೆ ವೈಭವಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *