ಗದಗ|15-20 ದಿನಕ್ಕೊಮ್ಮೆ ನೀರು ಪೂರೈಕೆ- 76 ಹಳ್ಳಿಗಳಲ್ಲಿ ತೀವ್ರ ಬಿಕ್ಕಟ್ಟು

3 Min Read

– ಸಂಪೂರ್ಣವಾಗಿ ಬತ್ತಿ ಹೋಗಿವೆ ಕೊಳವೆ ಬಾವಿಗಳು
– ತುರ್ತು ಪರಿಸ್ಥಿತಿ ಎದುರಿಸಲು 19 ಟ್ಯಾಂಕರ್‌ ಸನ್ನದ್ಧ

ಗದಗ: ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ಗದಗ-ಬೆಟಗೇರಿ (Gadag-Betageri) ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ(Drinking Water Problem) ಆರಂಭವಾಗಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಾದ ಗಜೇಂದ್ರಗಡ, ನರೇಗಲ್, ಲಕ್ಷ್ಮೇಶ್ವರ, ಮುಳಗುಂದ, ನರಗುಂದ ಹಾಗೂ ಶಿರಹಟ್ಟಿಯಲ್ಲಿ ಈಗಾಗಲೇ ನೀರಿನ ಅಭಾವ ತಲೆದೋರಿದ್ದು ಸಾರ್ವಜನಿಕರು ನೀರಿಗೂ ಪರದಾಡುವಂತಾಗಿದೆ.

- Advertisement -

ಪ್ರಸ್ತುತ ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ 15 ರಿಂದ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ ಮಧ್ಯಭಾಗದ ನಂತರ ಈ ಸಮಸ್ಯೆ ಇನ್ನೂ ಉಲ್ಬಣಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ (IMD) ಮುನ್ಸೂಚನೆಯಂತೆ ಈ ಬಾರಿ ಉಷ್ಣಾಂಶವು ಸರಾಸರಿಗಿಂತ 2°C ನಿಂದ 4°C ವರೆಗೆ ಹೆಚ್ಚಾಗಲಿದ್ದು, ಇದು ನೀರಿನ ಆವಿಯಾಗುವಿಕೆ ಮತ್ತು ಬಳಕೆಯನ್ನು ಹೆಚ್ಚಿಸಲಿದೆ.

- Advertisement -

ಜಿಲ್ಲಾಡಳಿತದ ಅಂಕಿಅಂಶಗಳ ಪ್ರಕಾರ, ಜಿಲ್ಲೆಯ ಸುಮಾರು 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗುವ ಲಕ್ಷಣಗಳಿವೆ. ಹಲವು ಕಡೆಗಳಲ್ಲಿ ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಜಲಕ್ಷಾಮ ದಟ್ಟವಾಗುತ್ತಿದೆ.

- Advertisement -

ತುಂಗಭದ್ರಾ, ಮಲಪ್ರಭಾ ನದಿಯ ಕಾಲುವೆ ಮೂಲಕ ಗ್ರಾಮೀಣ ಭಾಗಕ್ಕೆ ನೀರು ಹರಿದರೂ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ರೋಣ – ನರಗುಂದ ಭಾಗಕ್ಕೆ ರೇಣುಕಾ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ನಿತ್ಯ 26 MLD ನೀರಿನ ಅಗತ್ಯವಿದ್ದರೂ, ಸದ್ಯ ಕೇವಲ 16 ರಿಂದ 20 MLD ಮಾತ್ರ ಪೂರೈಕೆಯಾಗುತ್ತಿದೆ. ನರಗುಂದದ 18 ಜನವಸತಿ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇಲ್ಲಿ ‘ತಹಲ್’ ಕಂಪನಿ ನಿರ್ವಹಣೆ ಜವಾಬ್ದಾರಿ ಹೊತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

- Advertisement -

ಗದಗ, ಮುಂಡರಗಿ, ಶಿರಹಟ್ಟಿ ಭಾಗಕ್ಕೆ ಸಿಂಗಟಾಲೂರು ಬ್ಯಾರೇಜ್ ಮೂಲಕ ನೀರು ಒದಗಿಸಲಾಗುತ್ತಿದ್ದು, ‘ಎಲ್ ಆ್ಯಂಡ್ ಟಿ’ ಕಂಪನಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ. ನಿತ್ಯ 40 MLD ಬೇಡಿಕೆಯಿದ್ದರೂ ಸಿಗುತ್ತಿರುವುದು ಕೇವಲ 25 ರಿಂದ 28 MLD ಮಾತ್ರ. ಇದರಿಂದಾಗಿ ಮುಂಡರಗಿಯ 7, ಗದಗಿನ 14 ಮತ್ತು ಶಿರಹಟ್ಟಿಯ 16 ಗ್ರಾಮಗಳಲ್ಲಿ ನೀರಿನ ತೊಂದರೆ ಕಾಣಿಸಿಕೊಳ್ಳಲಿದೆ.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಸುಧಾರಿಸಲು ಭೀಷ್ಮ ಕೆರೆ ತುಂಬಿಸಲಾಗಿದ್ದು, 742 ಬೋರ್‌ವೆಲ್‌ಗಳು ಮರುಪೂರಣಗೊಂಡಿವೆ. ತುರ್ತು ಪರಿಸ್ಥಿತಿ ಎದುರಿಸಲು 19 ಟ್ಯಾಂಕರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮದ ಅಗತ್ಯ: ಜಿಲ್ಲೆಯ 342 ಹಳ್ಳಿಗಳಿಗೆ ನೀರು ಪೂರೈಸುವ ಖಾಸಗಿ ಕಂಪನಿಗಳ (ತಹಲ್ ಮತ್ತು ಎಲ್ ಆ್ಯಂಡ್ ಟಿ) ಕಾರ್ಯವೈಖರಿ ಹಾಗೂ ನೀರಿನ ಸಂಗ್ರಹದ ಕುರಿತು ಜಿಲ್ಲಾಡಳಿತವು ಕೂಡಲೇ ಉನ್ನತ ಮಟ್ಟದ ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಹಮ್ಮಿಗಿ ಬ್ಯಾರೇಜ್‌ನಲ್ಲಿ ನೀರು ಕಡಿಮೆ ಇರುವುದರಿಂದ ಬೇಸಿಗೆಯನ್ನು ಎದುರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನೀರಿನ ಕೊರತೆಯಿಂದಾಗಿ ಗದಗದ 14, ಶಿರಹಟ್ಟಿಯ 16, ಮುಂಡರಗಿಯ 07 ಹಳ್ಳಿಗಳಲ್ಲಿ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಒಂದೆಡೆ ನದಿ ಮೂಲದ ನೀರಿನ ಪೂರೈಕೆ ಕಡಿಮೆಯಾಗಿದ್ದರೂ, ಕಳೆದ ವರ್ಷದ ಉತ್ತಮ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಅಂತರ್ಜಲ ಮಟ್ಟದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಜಿಲ್ಲೆಯಲ್ಲಿರುವ ಸುಮಾರು 6,000 ಕೊಳವೆ ಬಾವಿಗಳ ಪೈಕಿ 3,700 ಬೋರ್‌ವೆಲ್‌ಗಳು ಮರುಪೂರಣಗೊಂಡಿವೆ.

ವಿಶೇಷವಾಗಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಭೀಷ್ಮ ಕೆರೆ ಆಸರೆಯಾಗಿದೆ. ಕೆರೆಯನ್ನು ತುಂಬಿಸಿದ ಪರಿಣಾಮ ಸುತ್ತಮುತ್ತಲಿನ 742 ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸಿದೆ.

ಒಂದು ವೇಳೆ ನೀರಿನ ಅಭಾವ ಕೈಮೀರಿದರೆ ತುರ್ತು ಪೂರೈಕೆಗಾಗಿ ಗದಗ-ಬೆಟಗೇರಿ ನಗರಸಭೆಯು 19 ಟ್ಯಾಂಕರ್‌ಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ. “ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ” ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Share This Article