ಗಣೇಶ ಉತ್ಸವದ ವೇಳೆ ಡಿಜೆ ಬ್ಯಾನ್; ಶಾಂತಿ ಭಂಗ ಮಾಡಿದ್ರೆ ಕ್ರಮ – ಗದಗ ಎಸ್ಪಿ ವಾರ್ನಿಂಗ್

Public TV
2 Min Read

ಗದಗ: ಗಣೇಶ್ ಹಬ್ಬದ ಸಂದರ್ಭದಲ್ಲಿ ಯಾರಾದ್ರು ಗಲಾಟೆ, ತೊಂದರೆ ಮಾಡಿದ್ರೆ ಅಥವಾ ಶಾಂತಿ ಭಂಗ ಮಾಡಿದ್ರೆ ಅಂತವರ ಮೇಲೆ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ತೇವೆ ಎಂದು ಗದಗ (Gadag) ಎಸ್ಪಿ ರೋಹನ್ ಜಗದೀಶ್ ಖಡಕ್ ವಾರ್ನ್ ನೀಡಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೆ ಸೂಕ್ಷ್ಮ, ಅತಿಸೂಕ್ಷ್ಮ, ಸಾಧಾರಣ ಎಂಬ ಪ್ರದೇಶಗಳನ್ನು ಗುರುತಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಸೂಕ್ತ ರೀತಿಯ ಭದ್ರತೆ ಕೈಗೊಳ್ಳಲಾಗಿದೆ. ಪೂರ್ವಭಾವಿಯಾಗಿ ರೌಡಿಶೀಟರ್, ಗುಂಡಾಗಳಿಗೆ ಈಗಾಗಲೇ ವಾರ್ನ್ ಮಾಡಿದೆ. ಅವರಿಂದ ಮುಚ್ಚಳಿಕೆ ಸಹ ಬರಿಸಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕೇಸ್; 5 ಕೋಟಿ ಮೌಲ್ಯದ ಆಸ್ತಿಗೆ ಇಡಿ ತಾತ್ಕಾಲಿಕ ಮುಟ್ಟುಗೋಲು

ಇನ್ನು ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ, ಗಣಪತಿ ಹೋಗುವ ಮಾರ್ಗದಲ್ಲಿ ಸಿಸಿ ಕ್ಯಾಮೆರಾಗಳು ಹಾಗೂ ಡ್ರೋನ್ ಕ್ಯಾಮೆರಾಗಳ ನಿಗಾವಹಿಸಲಾಗಿದೆ. ಗದಗ ಜಿಲ್ಲೆಯಾದ್ಯಂತ ಗಣೇಶ ಹಬ್ಬ ವಿಶೇಷವಾಗಿ ಹಾಗೂ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಸಾರ್ವಜನಿಕರ ಹಿತಾಸಕ್ತಿ ಹಾಗೂ ಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಪ್ಪಿ ಮನೆಯಲ್ಲಿ ಗಣೇಶ ಹಬ್ಬ ಭಲೇ ಜೋರು

ಜಿಲ್ಲೆಯಲ್ಲಿ ಡಿಜೆ ಬಳಕೆಯ ಮಾತೇ ಇಲ್ಲ
ಇನ್ನು ಡಿಜೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ನಿರ್ದೇಶನ ಜಾರಿ ಮಾಡಿದೆ. ನ್ಯಾಯಾಲಯದ ಆದೇಶಕ್ಕೆ ನಾವೆಲ್ಲ ತಲೆಬಾಗಲೇಬೇಕು. ಹಾಗಾಗಿ ಜಿಲ್ಲೆಯಾದ್ಯಂತ ಸುರಕ್ಷಿತವಾಗಿ ಹಬ್ಬ ಆಚರಣೆಗೆ ಜಿಲ್ಲಾ ಪೊಲೀಸ್ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಡಿಜೆ ಬಳಕೆಯ ಮಾತೇ ಇಲ್ಲ. ಬೇಕಾದ್ರೆ ಸೌಂಡ್ ಪರವಾನಿಗೆ ಪಡೆಯಬಹುದು. ಆದ್ರೆ ಅದಕ್ಕು ಯಾವ ಪ್ರದೇಶದಲ್ಲಿ ಇಷ್ಟೆಲ್ಲಾ ಡೆಸಿಮಲ್ ಇರಬೇಕು ಅಂತ ನಿಯಮ ಇದೆ ಎಂದು ಮಾಹಿತಿ ನೀಡಿದ್ದಾರೆ.

ಆ ನಿಯಮದ ಆಧಾರದ ಮೇಲೆ ಪರವಾನಗಿ ಪಡೆಯಬಹುದು. ನ್ಯಾಯಾಲಯದ ಆದೇಶ ಉಲ್ಲಂಘನೆಯಾದ್ರೆ ನಾವು ಮಾತ್ರ ಸುಮ್ನೆ ಬಿಡಲ್ಲ. ಸಾರ್ವಜನಿಕ ಹಬ್ಬ ಆಗಿರೋದ್ರಿಂದ ಎಲ್ಲರು ಸಹಕಾರ, ಸಹಮತದಿಂದ ಆಚರಿಸಬೇಕು. ಬೇರೆ ಏನಾದ್ರು ಬೆಳವಣಿಗೆಗಳಾದ್ರೆ ಪೊಲೀಸ್ ಇಲಾಖೆ ಮಾತ್ರ ಸುಮ್ಮನಿರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

Share This Article