16 ವರ್ಷಗಳಿಂದ ಗೃಹ ಬಂಧನದಲ್ಲಿ ವ್ಯಕ್ತಿ- ಸ್ಟೋರಿ ಕೇಳಿದರೆ ಕಲ್ಲು ಮನಸು ಕೂಡ ಕರಗುತ್ತೆ

Public TV
1 Min Read

ಗದಗ: ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೊಬ್ಬರು ಸುಮಾರು 16 ವರ್ಷಗಳಿಂದ ಕೈ ಕಾಲುಗಳಿಗೆ ಕಬ್ಬಿಣ ಬೇಡಿಗಳಿಂದ ಗೃಹ ಬಂಧನವನ್ನು ಅನುಭವಿಸುತ್ತಿದ್ದಾರೆ. ಇದೆಲ್ಲವನ್ನು ಕಣ್ಣಾರೆ ಕಂಡರೂ ಜನರು ಏನು ಮಾಡದ ಸ್ಥಿತಿಯಲ್ಲಿದ್ದಾರೆ.

ರೋಣ ತಾಲೂಕಿನ ಹಿರೇಹಾಳ ಗ್ರಾಮದ ಶರಣಪ್ಪ ಕಳೆದ 16 ವರ್ಷಗಳಿಂದ ಬಂಧನದಲ್ಲಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಾನಸಿಕ ಅಸ್ವಸ್ಥನಾಗಿದ್ದಾರೆ.ಅಂದಿನಿಂದ ಕೈ ಕಾಲು ಗಳಿಗೆ ಕಬ್ಬಿಣದ ಬೇಡಿ ಹಾಕಿ ಹೊರಗಿನ ಪ್ರಪಂಚವನ್ನೇ ನೋಡದ ಹಾಗೆ ಕೂಡಿಹಾಕಿದ್ದಾರೆ. ಬೇಡಿ ಹಾಕಿದ ಕೈಗಳಿಂದಲೇ ಊಟ, ಮೆತ್ತನೆಯ ನಡಿಗೆ, ಸ್ವಾತಂತ್ರ್ಯ, ಸ್ವ ಇಚ್ಛೆಯೂ ಇಲ್ಲದ ನರಕದ ಜೀವನ ಅನುಭವಿಸುತ್ತಿದ್ದಾರೆ.

2002ರಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆ ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಪ್ರಾರಂಭಿಸಿದ್ದಾರೆ. ಅಂದಿನಿಂದ ಕುಟುಂಬಸ್ಥರು ಇವನನ್ನ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಮಗನ ಸ್ಥಿತಿಯನ್ನು ಕಂಡು ಹೆತ್ತ ತಾಯಿ ಹನಮವ್ವ ಕೂಡ ಹಾಸಿಗೆ ಹಿಡಿದು ಕುಳಿತು ಬಿಟ್ಟಿದ್ದಾರೆ. ನಂತರ ಈ ಬಡ ಕುಟುಂಬದ ಜವಾಬ್ದಾರಿ ಹೊತ್ತಿದ್ದು, ಶರಣಪ್ಪನ ಸಹೋದರಿ ಯಮನವ್ವ. ಆದರೆ ಮನೆ ನಿರ್ವಹಣೆಗೆ ಈಕೆ ದೇವದಾಸಿಯಾಗಿದ್ದಾರೆ.

ಈ ಬಗ್ಗೆ ಶರಣಪ್ಪನನ್ನು ಕೇಳಿದರೆ ತನಗೆ ತಿಳಿದಂತೆ ಮಾತನಾಡುತ್ತಾರೆ. ಇಡೀ ಕುಟುಂಬ ಪ್ರತಿದಿನ ಕಣ್ಣಿರಲ್ಲಿ ಕೈ ತೊಳೆಯುತ್ತಿದೆ. ಕಳೆದ 16 ವರ್ಷಗಳಿಂದ ಹೊರಗಿನ ಪ್ರಪಂಚವೇ ನೋಡದಿರುವ ಯುವಕ ನಿತ್ಯ ನರಕದ ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಇವನು ವಿಚಿತ್ರವಾಗಿ ವರ್ತಿಸುತ್ತಾರೆ. ಸಿಕ್ಕ ಸಿಕ್ಕವರಿಗೆ ಹೊಡೆಯುವುದು, ಬಡಿಯುವುದು ಹೀಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಬ್ಬಿಣದ ಬೇಡಿಗಳನ್ನು ಹಾಕಲಾಗಿದೆ.

ಈ ಕುಟುಂಬದ ಸ್ಥಿತಿಯನ್ನು ನೋಡಿದರೆ ಕಲ್ಲಿನ ಮನಸು ಕೂಡ ಕರುಗುತ್ತದೆ. ಒಂದು ಕಡೆ ಊಟಕ್ಕೆ ಗತಿ ಇಲ್ಲ. ಇನ್ನೊಂದೆಡೆ ಚಿಕಿತ್ಸೆಗೆ ಹಣವಿಲ್ಲ. ಮತ್ತೊಂದೆಡೆ ದಿನಗೂಲಿ ಮಾಡದೆ ಜೀವನ ಸಾಗೋದಿಲ್ಲ. ಈ ರೀತಿಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಸಂಘ ಸಂಸ್ಥೆಯಿಂದ ನೆರವು ಸಿಗಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *