ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwara) ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಮಾಡಿದ ಅವರು, ಯಾರು ಬೆದರಿಕೆ ಕರೆ ಮಾಡಿದ್ದಾರೆ? ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರ್‌ಎಸ್‌ಎಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ಅದಕ್ಕೆ ಅವರಿಗೆ ಬೆದರಿಕೆ ಮಾಡುವುದು ಸರಿಯಲ್ಲ. ಎಲ್ಲವನ್ನು ಪರಿಶೀಲನೆ ಮಾಡುವುದಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮರ್ಯಾದೆ ಉಳಿಸಿಕೊಳ್ಳಲು ಕೆಲವು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ಸಿಎಂ ಔತಣಕೂಟ ಸಚಿವ ಸಂಪುಟ ಪುನಾರಚನೆಗೆ ಅಲ್ಲ. ಸರ್ಕಾರ ಬಂದು ಎರಡೂವರೆ ವರ್ಷ ಕಳೆದಿದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು ಎಂದು ಮಾತಾಡಿದ್ದೇವೆ. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದರು.
ಯಾದಗಿರಿ ಎಎಸ್‌ಐ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆಂಬ ಮಾಜಿ ಸಚಿವ ರಾಜುಗೌಡ ಆರೋಪದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಬಿಜೆಪಿ ಅವರು ಟೀಕೆ ಮಾಡುವುದರಲ್ಲಿ ನಿಸ್ಸೀಮರು. ಅದು ಅವರ ಕರ್ತವ್ಯ ಕೂಡ ಹೌದು. ನಾನು ಹೇಳುವುದು ಒಂದೇ. ಪಾಸಿಟಿವ್ ಕ್ರಿಟಿಸಸಂ ಮಾಡಿ. ರಾಜಕೀಯಕ್ಕಾಗಿ ಟೀಕೆ ಮಾಡುವುದು ಬೇಡ ಅಂತ ಟಕ್ಕರ್ ಕೊಟ್ಟರು. ಇದನ್ನೂ ಓದಿ: ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ: ನಾರಾ ಲೋಕೇಶ್‌ಗೆ ಡಿಕೆಶಿ ತಿರುಗೇಟು
ಉದ್ಯಮಿ ಕಿರಣ್ ಮಜುಂದಾರ್ ಶಾ ಟ್ವೀಟ್ ವಿಚಾರದ ಕುರಿತು ಮಾತನಾಡಿ, ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಸಮಯ ಹಿಡಿಯುತ್ತದೆ. ಅಷ್ಟರೊಳಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಕೆಲಸ ನಡೆಯುತ್ತಿರುವಾಗಲೇ ಟೀಕೆ ಮಾಡುವುದು ಸಮಂಜಸವಲ್ಲ. ಕೆಲಸ ಅಗಿಲ್ಲ ಎಂಬುದಾದರೆ ಮಾತನಾಡಲಿ ಎಂದು ಹೇಳಿದರು.
ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ 22 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಮಾಡಿದ್ದಾರೆ. ಗೂಗಲ್ ಎಐ ಹಬ್ ಹೋಗಿರುವುದು ಬೇರೆ ಕಾರಣಕ್ಕೆ. ನಾವು ಕೂಡ ಕರ್ನಾಟಕಕ್ಕೆ ಬರುವವರನ್ನು ಸ್ವಾಗತ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.