ಅಣ್ಣನ ಚಿತೆಗೆ ತಂಗಿಯಿಂದಲೇ ಅಂತ್ಯಕ್ರಿಯೆ- ಸ್ಮಶಾನದಲ್ಲಿದ್ದ ಅರೆಸುಟ್ಟ ಕಟ್ಟಿಗೆ ಆಯ್ದು ತಂದ ತಾಯಿ

Public TV
3 Min Read

-ಕೊರೊನಾ ಭೀತಿಯಿಂದ ಸಹಾಯಕ್ಕೆ ಬಾರದ ಜನ
-ಸ್ಮಶಾನಕ್ಕೆ ಶವ ಸಾಗಿಸಿ ಕೈ ತೊಳೆದುಕೊಂಡ ಅಧಿಕಾರಿಗಳು

ಬೆಳಗಾವಿ: ಅಣ್ಣನ ಚಿತೆಗೆ ತಂಗಿಯೇ ಅಂತ್ಯಕ್ರಿಯೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಯಾರು ಮುಂದಾಗಿದ್ದಾಗ ಸೋದರಿಯೇ ಕೊನೆಯ ವಿಧಿವಿಧಾನಗಳನ್ನ ನೆರೆವೇರಿಸಿದ್ದಾಳೆ.

ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ಸಾಗರ್ ಸಿಂಘೆ (32) ಸಾವನ್ನಪ್ಪಿದ ವ್ಯಕ್ತಿ. ಸಾಗರ್ ಸಿಂಘೆ ವಿಕಲಚೇತನನಾಗಿದ್ದು, ಕೆಲವು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗ್ರಾಮದಲ್ಲಿಯ ಜನರ ಪಡಿತರ ಚೀಟಿ, ಪಿಂಚಣಿ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಮಾಡಿಸುವ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್‍ಡೌನ್ ನಿಂದಾಗಿ ಕೆಲ ದಿನಗಳಿಂದ ಮನೆಯಲ್ಲಿ ಇದ್ದರು. ಶಸ್ತ್ರಚಿಕಿತ್ಸೆ ಬಳಿಕ ಸಾಗರ್ ಸಿಂಘೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ನೆರವಿಗೆ ಯಾರೂ ಬರಲಿಲ್ಲ: ಭಾನುವಾರ ಸಾಗರ್ ಅವರ ತಾಯಿ ಮತ್ತು ತಂಗಿ ಆತನನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಸಾಗರ್ ಸಾವನ್ನಪ್ಪಿದ್ದರು. ಬೆಳಗಾವಿಯಿಂದ ಊರಿಗೆ ತೆರಳಲು ನಮ್ಮ ಬಳಿ ಹಣವಿಲ್ಲ. ಯಾರಾದ್ರೂ ಸಹಾಯ ಮಾಡಿ ಎಂದು ತಾಯಿ-ಮಗಳು ಕಣ್ಣೀರಿಟ್ಟಿದ್ದಾರೆ. ಇನ್ನು ಕೆಲವರು ಕೊರೊನಾದಿಂದಲೇ ಸಾವನ್ನಪ್ಪಿರಬಹುದು ಎಂದು ಸಹಾಯ ಮಾಡಲು ಹಿಂದೇಟು ಹಾಕಿದ್ದಾರೆ.

12 ರೂ.ಯೂ ಇರಲಿಲ್ಲ: ಜಿಲ್ಲಾಸ್ಪತ್ರೆ ಸಿಬ್ಬಂದಿ ಶವವನ್ನು ಅಂಬುಲೆನ್ಸ್ ಮುಖಾಂತರ ಬೆಳಗಾವಿಯ ಸದಾಶಿವನಗರದಲ್ಲಿರುವ ಸ್ಮಶಾನಕ್ಕೆ ಸಾಗಿಸಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಸ್ಮಶಾನದಲ್ಲಿಯೂ ತಾಯಿ-ಮಗಳ ಸಹಾಯಕ್ಕೆ ಯಾರು ಮುಂದಾಗಿಲ್ಲ. ಶವ ಸಂಸ್ಕಾರಕ್ಕೆ ಬಳಸುವ ಕಟ್ಟಿಗೆ ಸುಮಾರು 1,200 ರೂ. ನೀಡಬೇಕು. ತಾಯಿ-ಮಗಳ ಬಳಿ 12 ರೂ. ಇಲ್ಲದಷ್ಟು ಬಡತನ. ಸಾಗರ್ ಸಾವಿನ ಸುದ್ದಿ ತಿಳಿಸಲು ಇವರ ಬಳಿ ಒಂದು ಮೊಬೈಲ್ ಸಹ ಇಲ್ಲ.

ಅರೆಸುಟ್ಟ ಕಟ್ಟಿಗೆ ಆಯ್ದ ತಾಯಿ: ಊರಿಗೆ ತೆರಳಲು ಹಣವಿಲ್ಲ. ಸಹಾಯಕ್ಕೂ ಯಾರು ಬರುತ್ತಿಲ್ಲ. ಹೇಗಾದ್ರೂ ಮಾಡಿ ಇಲ್ಲಿಯೇ ಪುತ್ರನ ಅಂತ್ಯಕ್ರಿಯೆ ಮಾಡಬೇಕೆಂದು ನಿರ್ಧರಿಸಿದ ತಾಯಿ ಅಲ್ಲಿಯೇ ಬಿದ್ದಿದ್ದ ಅರೆಸುಟ್ಟ ಕಟ್ಟಿಗೆಗಳನ್ನ ಆಯ್ದು ಚಿತೆಗೆ ಸಿದ್ಧತೆ ನಡೆಸಿದರು. ಇಬ್ಬರು ಸೇರಿ ಕಟ್ಟಿಗೆ ತಂದು ಚಿತೆ ಮಾಡಿ, ಪುತ್ರನ ಶವವನ್ನು ಮೇಲೆತ್ತಿಟ್ಟಿದ್ದಾರೆ.

ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು: ಈ ವಿಷಯ ತಿಳಿದು ಪಬ್ಲಿಕ್ ಟಿವಿ ಮತ್ತು ಕರವೇ ಕಾರ್ಯಕರ್ತರು ಸ್ಮಶಾನಕ್ಕೆ ತೆರಳಿದ್ದರು. ಕರವೇ ಕಾರ್ಯಕರ್ತರು ಶವವನ್ನು ಊರಿಗೆ ಸಾಗಿಸಲು ಸಹ ಮುಂದಾಗಿದ್ದರು. ಆದ್ರೆ ಒಮ್ಮೆ ಶವ ಚಿತೆಯ ಮೇಲಿಟ್ಟ ಮೇಲೆ ಎತ್ತಬಾರದು ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕರವೇ ಕಾರ್ಯಕರ್ತರು ಮುಂಜಾಗ್ರತ ಕ್ರಮವಾಗಿ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರದಲ್ಲಿ ತಾಯಿ-ಮಗಳಿಗೆ ಸಹಾಯವಾದರು. ಕೊನೆಗೆ ವಿಕಲಾಂಗ ಸೋದರ ಚಿತೆಗೆ ತಂಗಿಯೇ ಬೆಂಕಿ ಇಟ್ಟು, ವಿಧಿ ವಿಧಾನ ಪೂರ್ಣಗೊಳಿಸಿದ್ದಾರೆ.

ಮಗನನ್ನು ಕಳೆದುಕೊಂಡ ದುಃಖ ತಾಯಿಗೆ, ಆಸರೆಯಾಗಿದ್ದ ಅಣ್ಣನನ್ನು ಕಳೆದುಕೊಂಡ ದುಃಖ ತಂಗಿಗೆ. ಇಬ್ಬರ ಕಣ್ಣೀರು ಕಲ್ಲುಹೃದಯವಿದ್ದವರ ಕಣ್ಣಲ್ಲಿಯೂ ನೀರು ಬರುವಂತಿತ್ತು. ತಾಯಿ ಮಗಳಿಗೆ, ಮಗಳು ತಾಯಿ ಸಮಾಧಾನ ಹೇಳುತ್ತಾ ಕಣ್ಣೀರು ಹಾಕುತ್ತಿರುವ ದೃಶ್ಯ ನೋಡಿದ್ರೆ ದೇವರೆಷ್ಟು ಕ್ರೂರಿ ಎಂಬ ಭಾವ ಮೂಡುತ್ತೆ. ಬಡ ಕುಟುಂಬಕ್ಕೆ ಸಹಾಯವಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಜಿಲ್ಲಾಡಳಿತ ಶವವನ್ನು ಸ್ಮಶಾನಕ್ಕೆ ಸಾಗಿಸಿ ಕೈ ತೊಳೆದುಕೊಂಡಿದ್ದು ನಿಜಕ್ಕೂ ದೊಡ್ಡ ದುರಂತ.

ಈ ಸಂಬಂಧ ಪ್ರತಿಕ್ರಿಯೆ ಕೇಳಲು ಪಬ್ಲಿಕ್ ಟಿವಿ ಸಂಬಂಧಿಸಿದ ಅಧಿಕಾರಿಗಳ ಸಂಪರ್ಕಕ್ಕೆ ಮುಂದಾದ್ರೆ ಯಾರು ಫೋನ್ ರಿಸೀವ್ ಮಾಡುತ್ತಿಲ್ಲ. ಬಡವರ ಸಹಾಯಕ್ಕೆ ನಾವಿದ್ದೇವೆ ಅನ್ನೋ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆ ಸ್ಥಿತಿ ತಿಳಿದುಕೊಳ್ಳುವಲ್ಲಿ ವಿಫಲರಾದ್ರಾ ಅನ್ನೋ ಪ್ರಶ್ನೆ ಮೂಡುತ್ತದೆ.

ಅಂತ್ಯಕ್ರಿಯೆ ಬಳಿಕ ತಾಯಿ-ಮಗಳು ಬೆಳಗಾವಿಯಲ್ಲಿ ಅನಾಥರಾಗಿದ್ದರು. ಕೊನೆಗೆ ಬೆಳಗಾವಿ ಎಸ್‍ಪಿ ಇಬ್ಬರ ಸಹಾಯಕ್ಕೆ ಆಗಮಿಸಿ, ತಾಯಿ-ಮಗಳನ್ನು ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ವಿಕಲಾಂಗನಾಗಿದ್ದರೂ ಎಷ್ಟೋ ಬಡವರಿಗೆ ಪಡಿತರ ಚೀಟಿ, ಪಿಂಚಣಿ, ಸಾಲ ಸೌಲಭ್ಯ, ಸರ್ಕಾರದ ಯೋಜನೆಗಳನ್ನು ಮಾಡಿಸಿಕೊಡುತ್ತಿದ್ದ ಸಾಗರ್ ಇಂದು ಅನಾಥನಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *