ವಾಹನ ಸವಾರರೇ ಗಮನಿಸಿ.. ನಾಳೆ ಪೆಟ್ರೋಲ್, ಡೀಸೆಲ್ ಸಿಗಲ್ಲ!

Public TV
1 Min Read

ಬೆಂಗಳೂರು: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ಥಿಗೆ ಒತ್ತಾಯಿಸಿ ಪೆಟ್ರೋಲ್ ಪೂರೈಕೆ ಮಾಡೋ ಟ್ಯಾಂಕರ್ ಚಾಲಕರು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ನಗರಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ನಾಳೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುವ ಸಾಧ್ಯತೆ ಕಡಿಮೆ ಇದೆ.

ಕಳೆದ ಎರಡು ವರ್ಷಗಳ ಹಿಂದೆಯೂ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ. ಪ್ರಸ್ತುತ ನಗರದಲ್ಲಿ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಶೇಖರಣೆ ಮಾಡಿರುವ ತೈಲವನ್ನಷ್ಟೇ ಪೂರೈಕೆ ಮಾಡಲು ಸಾಧ್ಯವಿದೆ. ಇದರ ನಂತರ ಮತ್ತೆ ತೈಲ ಪೂರೈಕೆ ಮಾಡುವವರೆಗೂ ಇಂಧನ ಲಭ್ಯವಾಗುವ ಸಾಧ್ಯತೆಗಳು ಕಡಿಮೆ ಇದೆ.

ಪ್ರತಿಭಟನೆ ನಡೆಸುತ್ತಿರುವ ಟ್ಯಾಂಕರ್ ಚಾಲಕರ ಮನವೊಲಿಸಲು ಈಗಾಗಲೇ ತೈಲ ಕಂಪನಿಗಳು ಸಭೆ ನಡೆಸಿವೆ. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದಾರೆ. ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ.

https://www.youtube.com/watch?v=nCWqHObzQ9E

Share This Article
Leave a Comment

Leave a Reply

Your email address will not be published. Required fields are marked *