– ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ
ಅಹಮದಾಬಾದ್: ಕಳೆದ ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ (Air India Crash) ಸಂಬಂಧಿಸಿದಂತೆ ಎಎಐಬಿ ಪ್ರಾಥಮಿಕ ವರದಿ (AAIB Initial Report) ಬಿಡುಗಡೆಯಾಗಿದೆ. 15 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಬ್ಲ್ಯಾಕ್ ಬಾಕ್ಸ್ ಸೇರಿ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ವಿಮಾನ ದುರಂತಕ್ಕೆ ಕಾರಣ ಕಂಡುಕೊಳ್ಳಲಾಗಿದೆ.
ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್
ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ (Fuel Cutoff) ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ
ವಿಮಾನ ಅಪಘಾತ ತನಿಖಾ ಬ್ಯೂರೋ ಈ ವರದಿಯನ್ನು ಬಿಡುಗಡೆ ಮಾಡಿದೆ. ಟೇಕ್-ಆಫ್ ಸಮಯದಲ್ಲಿ ಸಹ-ಪೈಲಟ್ ವಿಮಾನವನ್ನು ನಿಯಂತ್ರಿಸುತ್ತಿದ್ದರೆ, ಮುಖ್ಯ ಪೈಲಟ್ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಮಾನವು ಗರಿಷ್ಠ 180 ನಾಟ್ಸ್ ವೇಗ ತಲುಪಿದ ತಕ್ಷಣ, ಇಂಧನ ಸ್ವಿಚ್‌ಗಳು ಒಂದರ ನಂತರ ಒಂದು ಆಫ್ ಆಗಿವೆ. ಇದರ ಪರಿಣಾಮವಾಗಿ, ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತು ಅವುಗಳ ಕಾರ್ಯಕ್ಷಮತೆ ಕುಸಿಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು
ಕಾಕ್‌ಪಿಟ್ ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯೂ ರೆಕಾರ್ಡ್ ಆಗಿದ್ದು ಅದರಲ್ಲಿ ಒಬ್ಬ ಪೈಲಟ್ ಇಂಧನ ಆಫ್ ಮಾಡಿದ್ದು ಯಾಕೆ? ಎಂದು ಕೇಳಿದರೆ, ಇನ್ನೊಬ್ಬ ನಾನು ಮಾಡಿಲ್ಲ ಎಂದು ಉತ್ತರಿಸಿದ್ದಾನೆ. ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಆದಾಗ್ಯೂ, ರಾಮ್ ಏರ್ ಟರ್ಬೈನ್ ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ, ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಟಲ್ಗಳಿಗೆ ಸಾಧ್ಯವಾಗಲಿಲ್ಲ. ಈ ಸಂಭಾಷಣೆ ನಡುವೆಯೇ ಪೈಲಟ್ ಮೇ ಡೇ ಘೋಷಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ
ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ
ವಿಮಾನಕ್ಕೆ ಇಂಧನ ತುಂಬಲು ಬಳಸಿದ ವಾಹನಗಳು (ಬೌಸರ್‌ಗಳು) ಮತ್ತು ಟ್ಯಾಂಕ್‌ಗಳಿಂದ ಇಂಧನದ ಮಾದರಿಗಳನ್ನು ತೆಗೆದು, ಅವುಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ಹೇಳಿದೆ. ಈ ಪರೀಕ್ಷೆಯ ನಂತರ, ಇಂಧನದ ಗುಣಮಟ್ಟವು ಯಾವುದೇ ದೋಷವಿಲ್ಲದೆ, ತೃಪ್ತಿಕರವಾಗಿತ್ತು ಎಂದು ದೃಢಪಡಿಸಲಾಗಿದೆ. ಆದ್ರೆ, ವಿಮಾನದ ಕೆಲವು ನಿರ್ದಿಷ್ಟ ಭಾಗಗಳಿಂದ (ಉದಾಹರಣೆಗೆ, ಎಪಿಯು ಫಿಲ್ಟರ್ ಮತ್ತು ಎಡ ರೆಕ್ಕೆಯ ರಿಫ್ಯೂಯಲ್/ಜೆಟ್ಟಿಸನ್ ವಾಲ್ವ್) ಬಹಳ ಕಡಿಮೆ ಪ್ರಮಾಣದ ಇಂಧನದ ಮಾದರಿಗಳು ಮಾತ್ರ ಸಿಕ್ಕಿವೆ. ಈ ಕಡಿಮೆ ಪ್ರಮಾಣದ ಮಾದರಿಗಳನ್ನು ಪರೀಕ್ಷಿಸಲು ವಿಶೇಷ ಸೌಲಭ್ಯಗಳಿರುವ ಬೇರೆ ಪ್ರಯೋಗಾಲಯದ ಅಗತ್ಯವಿದೆ.
ಏರ್ ಇಂಡಿಯಾಕ್ಕೆ ಮೊದಲೇ ಎಚ್ಚರಿಸಿತ್ತು ಅಮೆರಿಕ
ಬೋಯಿಂಗ್ ಡ್ರೀಮ್ ಲೈನರ್ ವಿಮಾನದಲ್ಲಿ ಇಂಧನ ಸ್ವಿಚ್‌ಗಳಲ್ಲಿ ಸಮಸ್ಯೆ ಇರುವ ಬಗ್ಗೆ ಈ ಹಿಂದೆ ಅಮೆರಿಕ ಗುರುತಿಸಿತ್ತು. ಇದರ ಬೆನ್ನಲೆ ಬೋಯಿಂಗ್ ಎಲ್ಲ ಏರ್‌ಲೈನ್‌ಗಳಿಗೆ ಎಚ್ಚರಿಕೆ ನೀಡಿತ್ತು. 7 ವರ್ಷಗಳ ಹಿಂದೆಯೇ ಯುಎಸ್‌ನ FAA ಸಂಸ್ಥೆ 737 ಜೆಟ್‌ಗಳ ಫ್ಯುಯೆಲ್ ಕಂಟ್ರೋಲ್ ಸ್ವಿಚ್ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರ ಭಾಗವಾಗಿ ಏರ್ ಇಂಡಿಯಾಗೂ ಈ ಮಾಹಿತಿಯನ್ನು ನೀಡಿತ್ತು. ಈ ಸ್ವಿಚ್‌ಗಳ ಬಗ್ಗೆ ಗಮನ ಹರಿಸಲು ಹೇಳಿತ್ತು. ಹೀಗಾಗೀ ಇದರಲ್ಲಿ ನಿರ್ಲಕ್ಷ್ಯ ಯಾರದು ಎನ್ನುವ ಪ್ರಶ್ನೆಯೂ ಉದ್ಬವಿಸಿದೆ.
ಸದ್ಯ ವಿಮಾನ ಅಪಘಾತ ತನಿಖಾ ಬ್ಯೂರೋ ತಂಡವು ಈಗ ಆರಂಭಿಕವಾಗಿ ಸಿಕ್ಕಿರುವ ಮಾಹಿತಿಗಳನ್ನು ಆಧರಿಸಿ, ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಜೊತೆಗೆ, ವಿಮಾನದಲ್ಲಿ ಅಳವಡಿಸಲಾಗಿರುವ ಫ್ಲೈಟ್ ರೆಕಾರ್ಡರ್‌ನಿಂದ ಡೇಟಾ ವಿಶ್ಲೇಷಿಸಲಾಗುತ್ತಿದೆ. ಈ ವಿಶ್ಲೇಷಣೆಯು ಅಪಘಾತಕ್ಕೆ ನಿಖರ ಕಾರಣವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.