ಇಂದಿನಿಂದ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭ

Public TV
1 Min Read

ನವದೆಹಲಿ: ಇಂದಿನಿಂದ ದೆಹಲಿ ಸಾರಿಗೆ ನಿಗಮ(ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಗೊಂಡಿದ್ದು, ಕೇಜ್ರಿವಾಲ್ ಸರ್ಕಾರದ ಈ ಹೊಸ ಯೋಜನೆ ದೀಪಾವಳಿಗೆ ಮಹಿಳೆಯರಿಗೆ ಉಡುಗೊರೆ ನೀಡಿದಂತಾಗಿದೆ.

ಭಾಯ್ ಧೂಜ್‍ನಲ್ಲಿ ಪ್ರಾರಂಭವಾದ ಫ್ರೀ-ರೈಡ್ ಯೋಜನೆಯನ್ನು ಪಡೆಯಲು ಡಿಟಿಸಿ ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುವುದು. ಹೀಗೆ ವಿತರಿಸಲಾದ ಗುಲಾಬಿ ಟಿಕೆಟ್ ಆಧಾರದ ಮೇಲೆ ಸರ್ಕಾರ ಸಾರಿಗೆಗೆ ಟಿಕೆಟ್ ದರವನ್ನು ಮರುಪಾವತಿ ಮಾಡಲಿದೆ.

ದೆಹಲಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಇಂದಿನಿಂದ ಪ್ರಾರಂಭವಾಗಿದೆ. ಅಭಿನಂದನೆಗಳು ದೆಹಲಿ! ಮಹಿಳಾ ಸುರಕ್ಷತೆಯ ಹೊರತಾಗಿ, ಇದು ದೆಹಲಿ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನೂ ಹೆಚ್ಚಿಸುತ್ತದೆ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಸೋಮವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಬಸ್‍ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಾಗಿ ತಿಳಿಸಿದರು. ಮಹಿಳೆಯರ ಸುರಕ್ಷತೆಗಾಗಿ ಮಂಗಳವಾರದಿಂದ ದೆಹಲಿಯ ಎಲ್ಲಾ ಬಸ್‍ಗಳಲ್ಲಿ ಬಸ್ ಮಾರ್ಷಲ್‍ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಸಿಹಿ ಸುದ್ದಿ ನೀಡಿದ್ದರು.

ದೆಹಲಿಯಲ್ಲಿ ಪ್ರತಿದಿನ 45 ಲಕ್ಷ ಪ್ರಯಾಣಿಕರು ಬಸ್ ಸೇವೆಯನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳಲು ಮಹಿಳೆಯರಿಗೆ ಸಹಾಯವಾಗಲಿ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೆಹಲಿ ಸರ್ಕಾರ ಹೊಸ ಯೋಜನೆ ರೂಪಿಸಿತ್ತು. ದೆಹಲಿಯ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲು ವಿಧಾನಸಭೆ ಅಧಿವೇಶನದಲ್ಲಿ ಆಗಸ್ಟ್ 29ರಂದು ದೆಹಲಿ ಸಚಿವ ಸಂಪುಟ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಅನುಮೋದನೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *