ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದು ಸಂಜಯ್ ಗಾಂಧಿ (Sanjay Gandhi) ಮತ್ತು ವಿಜಯ್ ರೂಪಾನಿ ಅವರಂತಹ ನಾಯಕರ ದುರಂತ ಸಾವುಗಳನ್ನು ನೆನಪಿಸುವಂತಿದೆ. ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣಕ್ಕೀಡಾದ ಪ್ರಮುಖ ರಾಜಕೀಯ ನಾಯಕರು ಯಾರ‍್ಯಾರು ಎಂಬ ಬಗ್ಗೆ ವಿವರ ಇಲ್ಲಿದೆ.
ಬಲವಂತರಾಯ್ ಮೆಹ್ತಾ
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಬಲವಂತರಾಯ್ ಮೆಹ್ತಾ ಅವರು 1965ರ ಸೆಪ್ಟೆಂಬರ್ 19 ರಂದು ಮೃತಪಟ್ಟರು. 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ವಾಯು ದುರಂತದಲ್ಲಿ ನಿಧನರಾದರು. ವಿಮಾನವನ್ನು ಗಡಿಯ ಬಳಿ ಪಾಕಿಸ್ತಾನವು ಯುದ್ಧ ವಿಮಾನವೆಂದು ತಪ್ಪಾಗಿ ಗುರುತಿಸಿ ಹೊಡೆದುರುಳಿಸಿತು. ಮೆಹ್ತಾ ಅವರ ಪತ್ನಿ, ಅವರ ಮೂವರು ಸಿಬ್ಬಂದಿ, ಒಬ್ಬ ಪತ್ರಕರ್ತ ಮತ್ತು ಇಬ್ಬರು ಸಿಬ್ಬಂದಿಯೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದರು. ಇದನ್ನೂ ಓದಿ: Ajit Pawar Dies | ಲ್ಯಾಂಡ್ ಆಗಲು ಇನ್ನೇನು 100 ಅಡಿ ಬಾಕಿಯಿದ್ದಾಗ ಪತನಗೊಂಡು ಸ್ಫೋಟ: ಪ್ರತ್ಯಕ್ಷದರ್ಶಿ
ಮೋಹನ್ ಕುಮಾರಮಂಗಲಂ
* ಕೇಂದ್ರದಲ್ಲಿ ರಾಜ್ಯ ಸಚಿವರಾಗಿದ್ದ ಕುಮಾರಮಂಗಲಂ ಪಾಂಡಿಚೇರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇಂದಿರಾ ಗಾಂಧಿ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಕುಮಾರಮಂಗಲಂ. 1973ರ ಜುಲೈ 30 ರಂದು ನವದೆಹಲಿ ಬಳಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾದರು.
ಸುರೇಂದ್ರ ನಾಥ್
* ಪಂಜಾಬಿನ ರಾಜ್ಯಪಾಲರಾಗಿದ್ದ ಸುರೇಂದ್ರ ನಾಥ್ 1994ರ ಜು.9 ರಂದು ಭೂಂತಾರ್ ವಿಮಾನ ನಿಲ್ದಾಣದ ಬಳಿ ಸಾವನ್ನಪ್ಪಿದ್ದರು. ಇವರ ಜೊತೆ ಇವರ ಕುಟುಂಬದ ಹತ್ತು ಸದಸ್ಯರೂ ಕೂಡ ಮರಣ ಹೊಂದಿದರು. ವಾರಾಂತ್ಯದ ಪ್ರವಾಸಕ್ಕೆಂದು ಸುರೇಂದ್ರ ನಾಥ್ ಕುಟುಂಬದವರೊಂದಿಗೆ ಚಂಢೀಗಡದಿಂದ ಪ್ರಯಾಣಿಸುತ್ತಿದ್ದರು.
ಸಂಜಯ್ ಗಾಂಧಿ
* 1980ರ ಜೂನ್ 23, ಗಾಂಧಿ-ನೆಹರೂ ಕುಟುಂಬ ಮತ್ತು ದೇಶಕ್ಕೆ ಅತ್ಯಂತ ಕರಾಳ ದಿನ. ಡೆಲ್ಲಿ ಫ್ಲೈಯಿಂಗ್ ಕ್ಲಬ್ಬಿನ ವಿಮಾನದಲ್ಲಿ ಸಂಜಯ್ ಗಾಂಧಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ಧರೆಗುರುಳಿತು. ಸಂಜಯ್ ಗಾಂಧಿ ಜೊತೆ ಪ್ರಯಾಣಿಸುತ್ತಿದ್ದ ಕ್ಯಾಪ್ಟನ್ ಸುಭಾಷ್ ಸೆಕ್ಸೆನಾ ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಂಜಯ್ ಗಾಂಧಿ ಸಾವನ್ನಪ್ಪಿದಾಗ ಅವರ ಮಗ ವರುಣ್ ಗಾಂಧಿ ಮೂರು ತಿಂಗಳ ಮಗು.
ಮಾಧವ್ ರಾವ್ ಸಿಂಧ್ಯಾ
* 2001ರ ಸೆ.29 ರಂದು ದೆಹಲಿಯಿಂದ ಕಾನ್ಪುರಕ್ಕೆ ಸಂಚರಿಸುತ್ತಿದ್ದಾಗ ಮಾಧವ್ ರಾವ್ ಸಿಂಧ್ಯಾ ಇದ್ದ ವಿಮಾನ ಪತನಗೊಂಡಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಮಣಿಪುರದ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ಸೆಸೆನಾ ಸಿ90 ವಿಮಾನ ನೆಲಕ್ಕುರುಳಿತ್ತು. ಇದನ್ನೂ ಓದಿ: ವಿಮಾನ ಪತನವಾಗಿ ‘ಮಹಾ’ ಡಿಸಿಎಂ ಅಜಿತ್ ಪವಾರ್ ಸಾವು – ಅಪಘಾತಕ್ಕೀಡಾದ ವಿಮಾನದ ಬಗ್ಗೆ ನಮಗೆಷ್ಟು ಗೊತ್ತು?
ಜಿ.ಎಂ.ಸಿ ಬಾಲಯೋಗಿ
ಲೋಕಸಭಾ ಸ್ಪೀಕರ್ ಆಗಿದ್ದ ಗಂತಿ ಮೋಹನ ಚಂದ್ರ ಬಾಲಯೋಗಿ ಅವರು 2002ರ ಮಾರ್ಚ್ 3 ರಂದು ಬೆಲ್ 206 ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ನೆಲಕ್ಕುರುಳಿತ್ತು. ಬಾಲಯೋಗಿ ಬ್ರಹ್ಮಾವರಂನಿಂದ ಹೈದರಾಬಾದಿಗೆ ಪ್ರಯಾಣಿಸುತ್ತಿದ್ದರು.
ಓ.ಪಿ.ಜಿಂದಾಲ್
ಹರಿಯಾಣ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಜಿಂದಾಲ್ ಖ್ಯಾತ ಉದ್ಯಮಿಯಾಗಿದ್ದರು. ಇವರು 2005ರ ಮಾ.31 ರಂದು ತನ್ನ ಖಾಸಗಿ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜಿಂದಾಲ್ ದುರಂತ ಸಾವಿಗೀಡಾಗಿದ್ದರು.
ವೈ.ಎಸ್.ರಾಜಶೇಖರ್ ರೆಡ್ಡಿ
* ಆಂಧ್ರಪ್ರದೇಶ ಕಂಡ ಪ್ರಭಾವಿ ಮುಖ್ಯಮಂತ್ರಿಗಳಲ್ಲಿ ಒಬ್ಬರು ರಾಜಶೇಖರ್ ರೆಡ್ಡಿ. ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಬೆಲ್ 430 ಹೆಲಿಕಾಪ್ಟರಿನಲ್ಲಿ 2009ರ ಸೆ.2 ರಂದು ಪ್ರಯಾಣಿಸುತ್ತಿದ್ದಾಗ ಕರ್ನೂಲಿನಿಂದ 74 ಕಿ,ಮಿ ದೂರವಿರುವ ರುದ್ರಕೊಂಡ ಬೆಟ್ಟದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ವೈಎಸ್ಆರ್ ಸೇರಿ ಇತರ ನಾಲ್ಕು ಅಧಿಕಾರಿಗಳೂ ಸಾವನ್ನಪ್ಪಿದ್ದರು. ಇದನ್ನೂ ಓದಿ: Ajit Pawar: ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ಐವರು ದುರ್ಮರಣ
ದೋರ್ಜಿ ಖಂಡು
* ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಖಂಡು 2011ರ ಏಪ್ರಿಲ್ 30 ರಂದು ಹೆಲಿಕಾಪ್ಟರ್ ಪತನಗೊಂಡು ದುರ್ಮರಣಕ್ಕೀಡಾದರು. ಪವನ್ ಹನ್ಸ್ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ಖಂಡು ತವಾಂಗ್‌ನಿಂದ ಇಟಾನಗರಿಗೆ ಸಂಚರಿಸುತ್ತಿದ್ದರು. ಇವರ ಜೊತೆ ಇನ್ನಿತರ ನಾಲ್ಕು ಮಂದಿ ಸಾವನ್ನಪ್ಪಿದ್ದರು.
ವಿಜಯ್ ರೂಪಾನಿ
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅಹಮದಾಬಾದ್‌ನಲ್ಲಿ ಕಳೆದ ವರ್ಷ ಜೂ.12ರಂದು ನಡೆದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡರು. ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ಏರ್ ಇಂಡಿಯಾ ವಿಮಾನ ದುರಂತದಲ್ಲಿ ಓರ್ವ ಬದುಕುಳಿದಿದ್ದು, 241 ಮಂದಿ ಮೃತಪಟ್ಟಿದ್ದಾರೆ.


