ಅ.2ರಿಂದ ರೈಲ್ವೆ ಇಲಾಖೆಯಿಂದ ಪ್ಲಾಸ್ಟಿಕ್ ಬ್ಯಾನ್

Public TV
1 Min Read

ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳು ವ್ಯಾಪಕವಾಗಿ ಬಳಕೆಯಲ್ಲಿದ್ದು, ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಇದರ ಭಾಗವಾಗಿ ಭಾರತೀಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿ ಒಂದು ಬಾರಿ ಬಳಸುವ(ಸಿಂಗಲ್ ಯುಸ್) ಪ್ಲಾಸ್ಟಿಕ್ ಪರಿಕರಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ಈ ನಿಯಮ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಮರು ಬಳಕೆಗಾಗಿ ಈಗಾಗಲೇ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ 360 ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಟ್ಟು 1,853 ಪ್ಲಾಸ್ಟಿಕ್ ವಾಟರ್ ಬಾಟಲ್‍ಗಳನ್ನು ಪುಡಿ(ಪ್ಲಾಸ್ಟಿಕ್ ವಾಟರ್ ಬಾಟಲ್ ಕ್ರಶಿಂಗ್ ಮಷಿನ್) ಮಾಡುವ ಯಂತ್ರಗಳನ್ನು ಅಳವಡಿಸಿದೆ. ಆದರೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕ್ರಮಕ್ಕೆ ಮುಂದಾಗಿದೆ.

ಇದೀಗ ರೈಲ್ವೆ ಮಂಡಳಿ ಐಆರ್‍ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್)ಗೆ ತಿಳಿಸಿದ್ದು, ಬಳಸಿದ ನಂತರ ಬಾಟಲಿಗಳನ್ನು ಸಂಸ್ಥೆಯಿಂದಲೇ ಮರಳಿ ಪಡೆಯಬೇಕೆಂದು ಸೂಚಿಸಿದೆ.

ಝೋನಲ್ ರೈಲ್ವೆ ಹಾಗೂ ಉತ್ಪಾದನಾ ಘಟಕಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಪ್ಪಿಸಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರು ಬಳಕೆ ಮಾಡುವುದು ಹಾಗೂ ಪ್ಲಾಸ್ಟಿಕ್ ತಿರಸ್ಕರಿಸುವ ಮೂರು ಸೂತ್ರಗಳನ್ನು ರಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಹೊರತುಪಡಿಸಿ ಮರು ಬಳಕೆ ಮಾಡಬಹುದಾದ ಕಡಿಮೆ ಬೆಲೆಯ ಚೀಲಗಳನ್ನು ಬಳಸುವಂತೆ ಜನರಿಗೆ ತಿಳುವಳಿಕೆ ನೀಡುವಂತೆ ಪ್ರಧಾನ ವ್ಯವಸ್ಥಾಪಕರು ರೈಲ್ವೆ ನೌಕರರಿಗೆ ಸೂಚನೆ ನೀಡಿದ್ದಾರೆ.

ಭಾರತೀಯ ರೈಲ್ವೆಯು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಸರಿಸುತ್ತಿದ್ದು, ಪ್ಲಾಸ್ಟಿಕ್ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು, ಅಲ್ಲದೆ ಪ್ಲಾಸ್ಟಿಕ್‍ನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *