ಅ.1 ರಿಂದ ದೇಶಾದ್ಯಂತ ಒಂದೇ ಡಿಎಲ್, ಆರ್‌ಸಿ- ವಿಶೇಷತೆ ಏನು? ಏನೆಲ್ಲ ಮಾಹಿತಿ ಇರುತ್ತೆ?

Public TV
3 Min Read

ಬೆಂಗಳೂರು: ಅಕ್ಟೋಬರ್ 1 ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ಸಾರಿಗೆ ಸಚಿವಾಲಯ ನಿರ್ಧರಿಸಿದೆ.

ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳನ್ನು ವಿತರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂ ಆರ್‍ಸಿ ಕಾರ್ಡ್‍ಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ.

ಈ ಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ, ಅಕ್ಟೋಬರ್ 1 ರಿಂದ ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ. ಹಳೆಯ ವಾಹನಗಳ ಮಾಲೀಕರು ನವೀಕರಣ ಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಹಾಗೂ ಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಸಂಬಂಧಿಸಿದ ವಿವರಗಳನ್ನು, ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಬಹುದಾಗಿದೆ. ಈ ಹೊಸ ನಿಯಮದಿಂದ ನಕಲಿ ದಾಖಲೆಗಳನ್ನು ತಡೆಯಬಹುದಾಗಿದೆ. ಈ ಹೊಸ ನಿಯಮ ಕರ್ನಾಟಕದಲ್ಲಿಯೂ ಅಕ್ಟೋಬರ್ ಒಂದರಿಂದಲೇ ಅನ್ವಯವಾಗಲಿದ್ದು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಒಂದೊಂದು ರಾಜ್ಯವು ಒಂದೊಂದು ವಿನ್ಯಾಸದ ಆರ್‍ಡಿ ಮತ್ತು ಡಿಎಲ್‍ಗಳನ್ನು ಈಗ ವಿತರಿಸುತ್ತಿವೆ. ಈಗ ಅಕ್ಟೋಬರ್ ನಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಮತ್ತು ಆರ್‍ಸಿಗಳ ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

ನೂತನ ಸ್ಮಾರ್ಟ್ ಡಿಎಲ್ ಹಾಗೂ ಆರ್‍ಸಿಗಳ ಬಣ್ಣ, ವಿನ್ಯಾಸಗಳು ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಆಗಿರಲಿದೆ. ವಿಶೇಷವಾಗಿ ಈ ಕಾರ್ಡ್‍ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್(ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಈ ಕಾರ್ಡ್‍ಗಳನ್ನು ಮೆಟ್ರೋ ಹಾಗೂ ಎಟಿಎಮ್ ಕಾರ್ಡ್‍ಗಳ ರೀತಿಯಲ್ಲೂ ಬಳಸಬಹುದಾಗಿದೆ. ಈ ಮೂಲಕ ಸಂಚಾರಿ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ವಾಹನ ಸವಾರರ ಮಾಹಿತಿಗಳನ್ನು ಕಲೆಹಾಕಬಹುದು.

ಇದಲ್ಲದೇ ವಿಶೇಷವಾಗಿ ವಾಹನ ಚಾಲಕರು ತಮ್ಮ ಅಂಗಾಂಗ ದಾನದ ಮಾಹಿತಿಯನ್ನೂ ಸಹ ಈ ಡಿಲ್‍ನಲ್ಲಿ ನಮೂದಿಸಬಹುದು. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ಸಹ ಈ ಕಾರ್ಡ್‍ಗಳಲ್ಲಿ ವಿವರ ನೀಡಲಾಗಿರುತ್ತದೆ. ನೂತನ ಆರ್‌ಸಿ ಕಾರ್ಡ್ ಮೂಲಕ ವಾಹನವು ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹಾಕುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರಿಂದಾಗಿ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.

ನೂತನ ಡಿಎಲ್‍ನಲ್ಲಿ ಏನೇನು ಇರುತ್ತದೆ?
ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಡಿಎಲ್ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವ್ಯಕ್ತಿಯ ಹೆಸರು, ರಕ್ತದ ಗುಂಪು ಹಾಗೂ ಅಂಗಾಂಗಳನ್ನು ದಾನ ಮಾಡುವ ಮಾಹಿತಿ, ವಾಹನಗಳ ವಿಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಮುದ್ರಿತವಾಗಿರುತ್ತದೆ.

ಆರ್‌ಸಿ ಕಾರ್ಡ್‍ನಲ್ಲಿ ಏನೇನು ಇರುತ್ತೆ?
ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಆರ್‍ಸಿ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನದ ವಿಧ, ವಾಣಿಜ್ಯೇತರ ಹಾಗೂ ವಾಣಿಜ್ಯ ಬಳಕೆಯ ವಿವರ, ವಾಹನಗಳ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಭಾರತ್ ಸ್ಟೇಜ್ 4 ಅಥವಾ 6 ಎಂಬುದರ ವಿವರ ಮುದ್ರಿತವಾಗಿರುತ್ತದೆ.

ಡಿಎಲ್ ಹಾಗೂ ಆರ್‌ಸಿಗಳಲ್ಲಿರುವ ಭದ್ರತಾ ಕ್ರಮಗಳು:
ನೂತನ ಸ್ಮಾಟ್ ಡಿಎಲ್ ಹಾಗೂ ಆರ್‍ಸಿಗಳಲ್ಲಿ ಅಳಿಸಲಾರದಂತೆ ಗಿಲ್ಲೋಚ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಇದಕ್ಕೆ ಬಳಸಲಾದ ಬಣ್ಣಗಳು ನೇರಾಳಾತಿತಾ ಬಣ್ಣಗಳಿಂದ ಕೂಡಿದ್ದರಿಂದ ಯಾವುದೇ ರೀತಿಯಲ್ಲಿ ಬಣ್ಣ ಬದಲಾಗುವುದಿಲ್ಲ. ಸೂಕ್ಷ್ಮ ರೀತಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ನಿರ್ದಿಷ್ಟ ಗುರುತಿನ ಪುರಾವೆ(ಹೊಲೊಗ್ರಾಮ್) ಬಳಕೆ ಮಾಡಿರಲಾಗುತ್ತದೆ. ಹಿಂಬದಿ ಹಾಗೂ ಮುಂಭಾಗದಲ್ಲಿ ವಾಟರ್ ಮಾರ್ಕ್ ಮೂಲಕ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅಧಿಕೃತ ಚಿಹ್ನೆಗಳನ್ನು ಮುದ್ರಿಸಲಾಗಿರುತ್ತದೆ.

ಯಾಕೆ ವಿತರಣೆ? ದರ ಎಷ್ಟು?
ಮಾಹಿತಿಗಳ ಪ್ರಕಾರ ಪ್ರತಿನಿತ್ಯ ಹೊಸ ಹಾಗೂ ಪರಿಷ್ಕೃತ 32,000 ಡಿಎಲ್‍ಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಹೊಸ ನೋಂದಣಿ ಹಾಗೂ ಮರು ನೋಂದಣಿಯ ಸುಮಾರು 43 ಸಾವಿರ ಕಾರ್ಡುಗಳನ್ನು ದೇಶದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೊಸ ಮಾದರಿಯ ವಿಶೇಷ ತಂತ್ರಜ್ಞಾನ ಹೊಂದಿರುವ ಕಾರ್ಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸಮಯದ ಉಳಿತಾಯ ಹಾಗೂ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಇಂದು ಮುದ್ರಿತವಾಗುತ್ತಿರುವ ಪ್ರತಿ ಕಾರ್ಡ್ ದರಕ್ಕಿಂತ 15 ರೂಪಾಯಿ ಮಾತ್ರ ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *