ಫಡ್ನವಿಸ್‌ ರಿಂದ ರಾಜನಾಥ್ ಸಿಂಗ್ ವರೆಗೆ – ವಿಮಾನ, ಹೆಲಿಕಾಪ್ಟರ್ ದುರಂತದಲ್ಲಿ ಪಾರಾದ ಪ್ರಮುಖ ರಾಜಕಾರಣಿಗಳು!

4 Min Read

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರಿಂದು ವಿಮಾನ ಪತನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಡೆ ಈ ವಿಮಾನ ಅಪಘಾತ ಸಂಜಯ್ ಗಾಂಧಿ (Sanjay Gandhi), ವಿಜಯ್ ರೂಪಾನಿ ಅವರಂತಹ ನಾಯಕರ ದುರಂತ ಸಾವುಗಳನ್ನ ನೆನಪಿಸಿದ್ರೆ, ಮತ್ತೊಂದು ಕಡೆ ವಿಮಾನ ಮತ್ತು ಹೆಲಿಕಾಪ್ಟರ್‌ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ರಾಜಕೀಯ ನಾಯಕರತ್ತ ಬೆಳಕು ಚೆಲ್ಲುತ್ತದೆ.

ಇಂತಹ ವಿಮಾನ ಮತ್ತು ಹೆಲಿಕಾಪ್ಟರ್‌ ದುರಂತಗಳಲ್ಲಿ ಪವಾಡ ಸದೃಶವಾಗಿ ಪಾರಾದ ಪ್ರಮುಖ ರಾಜಕೀಯ ನಾಯಕರು (Politicians) ಯಾರ‍್ಯಾರು ಎಂಬ ಬಗ್ಗೆ ವಿವರ ಇಲ್ಲಿದೆ.

1977 ರಲ್ಲಿ ಮೊರಾರ್ಜಿ ದೇಸಾಯಿ
1977 ರ ನವೆಂಬರ್ 4 ರಂದು. ದೆಹಲಿಯ (Delhi) ಪಾಲಂ ನಿಲ್ದಾಣದಿಂದ ಮೊರಾರ್ಜಿ ದೇಸಾಯಿ ಅವರನ್ನ ಹೊತ್ತೊಯ್ಯುತ್ತಿದ್ದ ವಿಮಾನವು ಅಸ್ಸಾಂಗೆ (Assam) ಹೊರಟಿತ್ತು. ರಷ್ಯಾ ನಿರ್ಮಿತ ಟುಪೋಲೆವ್ ಟಿಯು-124 ವಿಮಾನವು ಇನ್ನೇನು ಲ್ಯಾಂಡಿಂಗ್‌ ಮಾಡಬೇಕು ಎನ್ನುವಷ್ಟರಲ್ಲಿ ಭತ್ತದ ಗದ್ದೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಸಂಜೆ ವಿಮಾನ ರನ್‌ವೇಯಲ್ಲಿ ಇಳಿಯಲು ಸಿದ್ಧವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಎತ್ತರಕ್ಕೆ ಹಾರಿತು. ವಿಮಾನವು ರನ್‌ವೇಯನ್ನು ದಾಟಿ ವಾಯುನೆಲೆಯ ದೂರದಲ್ಲಿದ್ದ ಗದ್ದೆಗೆ ಅಪ್ಪಳಿಸಿತ್ತು. ವಿಮಾನ ಅಪ್ಪಳಿಸಿದ ರಭಸಕ್ಕೆ ಕಾಕ್‌ಪಿಟ್ ವಿಮಾನದಿಂದ ಬೇರ್ಪಟ್ಟಿತು. ಇಬ್ಬರು ಪೈಲಟ್‌ಗಳು ಮತ್ತು ಮೂವರು ಸಿಬ್ಬಂದಿ ಸಾವನ್ನಪ್ಪಿದರು. ಪತನಗೊಂಡ ನಂತರ 81 ವರ್ಷದ ಮೊರಾರ್ಜಿ ದೇಸಾಯಿ ಅವರನ್ನ ಕೂಡಲೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

2004 ರಲ್ಲಿ ಅಹ್ಮದ್ ಪಟೇಲ್, ಪೃಥ್ವಿರಾಜ್ ಚವಾಣ್ ಮತ್ತು ಕುಮಾರಿ ಸೆಲ್ಜಾ
2004 ರಲ್ಲಿ ಹಿರಿಯ ಕಾಂಗ್ರೆಸ್‌ ನಾಯಕರಾದ (Congress Leaders) ಅಹ್ಮದ್‌ ಪಟೇಲ್‌, ಪೃಥ್ವಿರಾಜ್ ಚವಾಣ್ ಮತ್ತು ಕುಮಾರಿ ಸೆಲ್ಜಾ ಅವರು ಸಹ ವಿಮಾನ ಅಪಘಾತದಲ್ಲಿ ಸಿಲುಕಿದ್ದರು. ಭೀಕರ ಅಪಘಾತದ ಹೊರತಾಗಿಯೂ ಮೂವರು ನಾಯಕರು ಅಚ್ಚರಿಯಾಗಿ ಬದುಕುಳಿದರು. ತಕ್ಷಣದ ವೈದ್ಯಕೀಯ ಚಿಕಿತ್ಸೆಯಿಂದ ಅವರನ್ನ ರಕ್ಷಣೆ ಮಾಡಲಾಗಿತ್ತು.

2005 ರಲ್ಲಿ ಅಮರಿಂದರ್ ಸಿಂಗ್, ಪ್ರತಾಪ್ ಸಿಂಗ್ ಬಜ್ವಾ
2005 ರಲ್ಲಿ, ಪಂಜಾಬ್ ನಾಯಕರಾದ ಅಮರಿಂದರ್ ಸಿಂಗ್ ಮತ್ತು ಪ್ರತಾಪ್ ಸಿಂಗ್ ಬಜ್ವಾ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಗಂಭೀರ ಗಾಯಗೊಂಡಿದ್ದ ಹೊರತಾಗಿಯೂ ತಕ್ಷಣದ ವೈದ್ಯಕೀಯ ಚಿಕಿತ್ಸೆಯಿಂದ ಬದುಕುಳಿದ್ದರು.

ಸುಖ್ವಿಂದರ್ ಸಿಂಗ್ ಬಾದಲ್ ಗ್ರೇಟ್‌ ಎಸ್ಕೇಪ್‌
ಪಂಜಾಬ್‌ ಮಾಜಿ ಸಿಎಂ ಸುಖ್ವಿಂದರ್‌ ಸಿಂಗ್‌ ಬಾದಲ್‌ ಅವರು ಅಧಿಕೃತ ಪ್ರಯಾಣದ ಸಮಯದಲ್ಲೇ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಲುಕಿದ್ದರು. ಪ್ರಯಾಣದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಎಚ್ಚೆತ್ತ ಪೈಲಟ್‌ ಸೇಫ್‌ ಲ್ಯಾಂಡಿಗ್‌ ಮಾಡಿದ್ದರಿಂದ ಬಾದಲ್‌ ಸಣ್ಣ ಗಾಯವೂ ಇಲ್ಲದೇ ಪಾರಾದರು.

2008ರಲ್ಲಿ ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ
2008 ರಲ್ಲಿ, ಇಂದಿನ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ (Rajnath Singh) ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಉತ್ತರ ಪ್ರದೇಶದಲ್ಲಿ ಭಯಾನಕ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಲುಕಿದ್ದರು. ತೆರೆದ ಮೈದಾನದಲ್ಲಿ ಲ್ಯಾಂಡಿಂಗ್‌ ಮಾಡುವ ವೇಳೆ, ಹೆಲಿಕಾಪ್ಟರ್ ಒಣ ಹುಲ್ಲಿನ ರಾಶಿ ಬಳಿ ಪತನಗೊಂಡಿತ್ತು. ಇದೇ ವೇಳೆ ಹುಲ್ಲಿನ ರಾಶಿಗೂ ಬೆಂಕಿ ಹೊತ್ತಿಕೊಂಡಿತ್ತು. ಎಲ್ಲವೂ ಮುಗಿದೇ ಹೋಯಿತು ಅಂತ ಜನ ಭಾವಿಸಿದ್ದರು. ಆದ್ರೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಇಬ್ಬರು ನಾಯಕರೂ ಸೇಫ್‌ ಆದರು. ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ತುರ್ತು ಭೂಸ್ಪರ್ಶದಿಂದ ಅಶೋಕ್‌ ಗೆಹ್ಲೋಟ್‌ ಬಚಾವ್‌
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2011 ರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ರಾಜಸ್ಥಾನದಲ್ಲಿ ಸಮೀಪದ ನಗರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೂಡಲೇ ಹೆಲಿಕಾಪ್ಟರ್‌ ಅಲುಗಾಡಲು ಶುರು ಮಾಡಿತು. ರೋಹ್ಟರ್‌ ಬ್ಲೇಡ್‌ನಲ್ಲಿ ಉಂಟಾದ ದೋಷದಿಂದ ಹೆಲಿಕಾಪ್ಟರ್‌ ಪತನಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಆದ್ರೆ ಸಮಯಪ್ರಜ್ಞೆ ಮೆರೆದ ಪೈಲಟ್‌ ಕೂಡಲೇ ತುರ್ತು ಭೂಸ್ಪರ್ಶ ಮಾಡಿ ಅನಾಹುತ ತಪ್ಪಿಸಿದ್ರು. ಈ ಘಟನೆ ಬಳಿಕ ಹೆಲಿಕಾಪ್ಟರ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

2017 ರಲ್ಲಿ ದೇವೇಂದ್ರ ಫಡ್ನವಿಸ್‌
ಮಹಾರಾಷ್ಟ್ರದ ಹಾಲಿ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಒಂದೇ ವರ್ಷದಲ್ಲಿ ಅನೇಕ ವಾಯುಯಾನ ಘಟನೆಗಳಿಂದ ಬದುಕುಳಿದಿದ್ದಾರೆ. ಅದು ಆಕಸ್ಮಿಕವೋ ಅದೃಷ್ಟವೋ ಅನ್ನೋದು ಇಂದಿಗೂ ಅನೇಕರ ಪ್ರಶ್ನೆ.

ಹೌದು. 2017 ರಲ್ಲಿ ಫಡ್ನವಿಸ್‌ ಅನೇಕ ಬಾರಿ ಹೆಲಿಕಾಪ್ಟರ್ ದುರಂತಗಳನ್ನ ಎದುರಿಸಿದ್ದರು. ಈ ಪೈಕಿ ಲಾತೂರ್‌ ದುರಂತ ಗಂಭೀರವಾದದ್ದು. ಲಾತೂರ್ ಪ್ರದೇಶದಲ್ಲಿ ಟೇಕಾಫ್ ಸಮಯದಲ್ಲಿ ಫಡ್ನವಿಸ್‌ ಅವರಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಓವರ್‌ಹೆಡ್‌ ವಿದ್ಯುತ್ ತಂತಿಗಳಿಗೆ ಸಿಲುಕಿಕೊಂಡು ಭಾರೀ ಎತ್ತದರಿಂದ ನೆಲಕ್ಕೆ ಅಪ್ಪಳಿಸಿತ್ತು. ಆದಾಗ್ಯೂ ಫಡ್ನವಿಸ್‌ ಹಾಗೂ ಜೊತೆಗಿದ್ದವರು ಸಣ್ಣಪುಟ್ಟ ಗಾಯಗಳಿಂದ ಬದುಕುಳಿದರು. ಆ ನಂತರ ಎಂಜಿನ್‌ನಲ್ಲಿ ದೋಷ, ತೂಕದಲ್ಲಿ ಅಸಮತೋಲನ, ಹೆಲಿಕಾಪ್ಟರ್ ರೋಟರ್‌ ಮತ್ತು ಕೇಬಲ್‌ಗಳಲ್ಲಿ ದೋಷ ಕಾಣಿಸಿಕೊಂಡ ಬಳಿಕ ತುರ್ತು ಲ್ಯಾಂಡಿಂಗ್‌ ಹೀಗೆ ಅನೇಕ ಸನ್ನಿವೇಶಗಳಲ್ಲಿ ಪಾರಾಗಿದ್ದರು. ಪ್ರತಿಯೊಂದು ಪ್ರಕರಣದಲ್ಲೂ ಪೈಲಟ್‌ಗಳ ತ್ವರಿತ ನಿರ್ಧಾರ ಜೀವಹಾನಿ ತಡೆದಿದೆ ಅನ್ನೋದು ಗಮನಾರ್ಹ.

ಈ ಘಟನೆಗಳ ನಂತರ, ಮಹಾರಾಷ್ಟ್ರದಲ್ಲಿ ವಿವಿಐಪಿ ವಿಮಾನ ಪ್ರಯಾಣಕ್ಕಾಗಿ ಕಠಿಣ ಸುರಕ್ಷತಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ನಂತರ ಪರಿಚಯಿಸಲಾಯಿತು. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳ ಹೊರತಾಗಿಯೂ ಇಂದಿನ ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ದುರ್ಮರಣಕ್ಕೀಡಾಗಿದ್ದಾರೆ.

Share This Article