ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

Public TV
2 Min Read

ನವದೆಹಲಿ: ಚುನಾವಣಾ ಆಯೋಗ ಚುನಾವಣಾ ಬಾಂಡ್‌ಗಳ (Electoral Bonds) ಹೊಸ ದತ್ತಾಂಶವನ್ನು ಭಾನುವಾರ ಬಹಿರಂಗಪಡಿಸಿದೆ. ಸುಪ್ರೀಂ ಕೋರ್ಟ್‌ಗೆ (Supreme Court) ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್‌ ಕವರ್‌ನಲ್ಲಿ) ಸಲ್ಲಿಸಲಾಗಿದ್ದ ಮಾಹಿತಿಯನ್ನು ಆಯೋಗ ಬಿಡುಗಡೆಗೊಳಿಸಿದೆ.

ಲೋಕಸಭಾ ಚುನಾವಣೆಗೆ (Lok Sabha Elections) ದಿನಾಂಕ ಘೋಷಣೆ ಮಾಡಿದ ಮರುದಿನವೇ ಹೊಸ ದತ್ತಾಂಶಗಳ ಮಾಹಿತಿಯನ್ನು ಆಯೋಗ ಹಂಚಿಕೊಂಡಿದೆ. ಇದು 2019ರ ಏಪ್ರಿಲ್‌ 12ಕ್ಕಿಂತಲೂ ಹಿಂದಿನ ದತ್ತಾಂಶವಾಗಿದೆ ಎಂದು ಹೇಳಿದೆ. 2019ರ ಏಪ್ರಿಲ್‌ 12ರ ನಂತರದ ಅವಧಿಯ ಚುನಾವಣಾ ಬಾಂಡ್‌ ವಿವರಗಳನ್ನು ಕಳೆದ ವಾರ ಆಯೋಗ ಬಿಡುಗಡೆ ಮಾಡಿತ್ತು. ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಸೀಲ್ಡ್ ಕವರ್‌ನಲ್ಲಿ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಸಲ್ಲಿಸಿರುವುದಾಗಿಯೂ ಚುನಾವಣಾ ಆಯೋಗ (Election Commission) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳಿಂದ ಸ್ವಕರಿಸಿದ ದತ್ತಾಂಶವನ್ನು ಸೀಲ್‌ ಮಾಡಿದ ಕವರ್‌ಗಳಿಂದ ತೆರೆಯದೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಮಾರ್ಚ್ 15, 2024 ರಂದು ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ (ಎಲ್ಲಾ ಡೊಮೇನ್ ಹೆಸರುಗಳ ಡೇಟಾಬೇಸ್) ಭೌತಿಕ ಪ್ರತಿಗಳನ್ನು ಡಿಜಿಟೈಸ್ ಮಾಡಿದ (ಫೋಟೋ, ಬರಹ, ಸೌಂಡ್‌ ಮೊದಲಾದ ದಾಖಲೆಗಳನ್ನು ಕಂಪೂಟರ್‌ ಮೂಲಕ ಡಿಜಿಟಲ್‌ ಮಾದರಿಗೆ ಪರಿವರ್ತಿಸುವುದು) ದಾಖಲೆಯೊಂದಿಗೆ (Digitised Record) ಹಿಂದಿರುಗಿಸಿದೆ. ಭಾರತೀಯ ಚುನಾವಣಾ ಆಯೋಗ ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಿಂದ ಡಿಜಿಟೈಸ್ ಮಾಡಿ ಸ್ವೀಕರಿಸಿದ ಡೇಟಾವನ್ನು ಅಪ್‌ಲೋಡ್ ಮಾಡಿದೆ” ಎಂದು ಆಯೋಗ ಹೇಳಿದೆ.

sbi bank
ಸಾಂದರ್ಭಿಕ ಚಿತ್ರ

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಇತ್ತೀಚಿನ ದಾಖಲೆಗಳಲ್ಲಿ ಬಾಂಡ್‌ಗಳ ದಿನಾಂಕ, ಮುಖಬೆಲೆ, ಬಾಂಡ್‌ಗಳ ಸಂಖ್ಯೆ, ಭಾರತೀಯ ಸ್ಟೇಟ್‌ ಬ್ಯಾಂಗ್‌ ಶಾಖೆ, ರಶೀದಿ ಪಡೆದ ದಿನಾಂಕ ಮತ್ತು ಕ್ರೆಡಿಟ್‌ ದಿನಾಂಕದ ದಾಖಲೆಗಳನ್ನು ಮಾತ್ರ ತೋರಿಸುತ್ತದೆ.

ಪಕ್ಷವಾರು ಬಾಂಡ್‌ಗಳ ಮಾಹಿತಿ:
ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ (BSP), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಥವಾ ಸಿಪಿಐ(M) ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ನಾವು ಈ ಅವಧಿಯಲ್ಲಿ ಯಾವುದೇ ದೇಣಿಗೆ ಸ್ವೀಕರಿಸಿಲ್ಲ ಎಂದು ಹೇಳಿಕೊಂಡಿವೆ. ಜೊತೆಗೆ ತ್ರಿಪುರಾದ ಬಿಜೆಪಿ ಘಟಕ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕ ಸಹ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆ ಪಡೆದಿಲ್ಲ ಎಂಬುದಾಗಿ ಹೇಳಿಕೊಂಡಿವೆ.

656 ಕೋಟಿ ದೇಣಿಗೆ ಪಡೆದಿರುವ ಡಿಎಂಕೆ:
ತಮಿಳುನಾಡಿನ ಡಿಎಂಕೆ ಪಕ್ಷವು ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್‌ನಿಂದ 509 ಕೋಟಿ ರೂ. ಸೇರಿದಂತೆ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 656.5 ಕೋಟಿ ರೂ.ಗಳಷ್ಟು ದೇಣಿಗೆಯನ್ನು ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್‌ನ ಗೋವಾ ಘಟಕವು ವಾಸ್ಕೋಡಗಾಮಾ ಮೂಲದ ವಿಎಂ ಸಲಗಾಂವ್ಕರ್ ಕಂಪನಿಯಿಂದ 30 ಲಕ್ಷ ರೂ. ದೇಣಿಗೆ ಪಡೆದಿರುವುದಾಗಿ ತಿಳಿಸಿದೆ.

ಬಿಜೆಪಿಗೆ ಸಿಂಹಪಾಲು:
ತೆಲಂಗಾಣದ ಬಿಆರ್‌ಎಸ್‌ ಪಕ್ಷವು 2018 ರಿಂದ 2019ರ ಅವಧಿಯಲ್ಲಿ 230.65 ಕೋಟಿ ರೂ.ಗಳ ದೇಣಿಗೆಯನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಇನ್ನೂ 2023ರ ಮಾರ್ಚ್‌ ವರೆಗೆ ಪಕ್ಷಗಳು ನಗದೀಕರಿಸಿದ ಎಲ್ಲಾ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಯು ಶೇ48 ಕ್ಕಿಂತ ಸ್ವಲ್ಪ ಕಡಿಮೆ ಹಣವನ್ನು ಪಡೆದಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್‌ಗೆ ಶೇ.11 ರಷ್ಟು ಹಣ ಬಂದಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ.

Share This Article