ತಾಯಿ-ಮಗುವನ್ನು ಅಟ್ಟಾಡಿಸಿಕೊಂಡು ಬಂದ ಚಿರತೆಗಳು!- ವಿಡಿಯೋ ವೈರಲ್

Public TV
1 Min Read

ನೆದರ್ಲ್ಯಾಂಡ್: ಉದ್ಯಾನವನೊಂದರಲ್ಲಿ ತಾಯಿ-ಮಗು ಸೇರಿದಂತೆ ಕುಟುಂಬದವರನ್ನು ಎರಡು ಚಿರತೆಗಳು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನೆದರ್ಲ್ಯಾಂಡ್ ಹೇಗ್ ನಗರದಲ್ಲಿ ನಡೆದಿದೆ.

ಡಚ್ ವನ್ಯಜೀವಿ ಉದ್ಯಾನವನದಲ್ಲಿ ಈ ಘಟನೆ ಸಂಭವಿಸಿದ್ದು, ದಂಪತಿ ಕಾರಿನಿಂದ ಹೊರಬಂದ ಬಳಿಕ ಚಿರತೆಗಳು ಹಿಂಬಾಲಿಸಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಫ್ರಾನ್ಸ್ ನ ದಂಪತಿ ತಮ್ಮ ಮಗುವಿನೊಂದಿಗೆ ಬೀಕ್ಸೆ ಬರ್ಗೆನ್ ಸಫಾರಿ ಪಾರ್ಕ್ ಗೆ ಹೋಗಿದ್ದರು. ಉದ್ಯಾನವನದಲ್ಲಿ ಕಾರಿನಿಂದ ಇಳಿಯಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೂ ದಂಪತಿ ತಮ್ಮ ಮಗುವಿನೊಂದಿಗೆ ಕಾರಿನಿಂದ ಇಳಿದು ಪಾರ್ಕ್ ನಲ್ಲಿ ಸುತ್ತಾಡುತ್ತಿದ್ದರು.

ಇದೇ ವೇಳೆ ಮಹಿಳೆಯ ಕೈಯಲ್ಲಿ ಮಗು ನೋಡಿ ಒಂದು ಚಿರತೆ ಹಿಂಬಾಲಿಸಿದೆ. ಅದರಿಂದ ತಪ್ಪಿಸಿಕೊಂಡು ಕಾರಿನ ಬಳಿ ಹೋಗುತ್ತಿದ್ದಂತೆಯೇ ಮತ್ತೊಂದು ಚಿರತೆ ದೂರದಿಂದ ತಾಯಿ ಮಗುವಿನ ಬಳಿ ಓಡಿ ಬಂದಿದೆ. ಆಗ ಭಯಗೊಂಡ ತಾಯಿ ಕೆಲ ಸೆಕೆಂಡ್ ನಿಂತು ಬಿಟ್ಟಿದ್ದಾರೆ. ನಂತರ ಮಗುವನ್ನು ಎತ್ತಿಕೊಂಡು ತಾಯಿ ಕಾರಿ ಬಳಿ ಓಡಿದ್ದಾರೆ. ಆಗಲೂ ಚಿರತೆ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದೆ. ಕೂಡಲೇ ಎಲ್ಲರೂ ಕಾರಿನೊಳಗೆ ಹೋಗಿದ್ದು, ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಅದೇ ಉದ್ಯಾನವನಕ್ಕೆ ಬಂದಿದ್ದ ಬೇರೆ ಪ್ರವಾಸಿಗರು ಕಾರಿನಲ್ಲಿ ಕುಳಿತು ಪಾರ್ಕ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ನಂತರ ಇದನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ಇದೂವರೆಗೂ 46 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಪಾರ್ಕ್ ನಲ್ಲಿ ಪ್ರವಾಸಿಗರು ಕಾರಿನಿಂದ ಹೊರಗಿಳಿಯಬಾರದು ಎಂದು ಉದ್ಯಾನವನದಲ್ಲಿ ನಿರ್ದೇಶನಗಳಿವೆ. ಆದ್ರೂ ಈ ದಂಪತಿ ಕಾರಿನಿಂದ ಹೊರಗಿಳಿದು ಪಾರ್ಕ್‍ನ ನಿಯಮವನ್ನು ಉಲ್ಲಂಘಿಸಿದ್ದಾರೆ. ಸದ್ಯ ದಂಪತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ಪಾರ್ಕ್ ಮ್ಯಾನೇಜ್ ಮೆಂಟ್ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *