ಮಾಧ್ಯಮಗಳ ವಿರುದ್ಧ ಪ್ಲೇ ಕಾರ್ಡ್ ಗರ್ಲ್ ರಂಪಾಟ

Public TV
1 Min Read

– ಕೋರ್ಟ್ ಆವರಣದಲ್ಲೇ ಮಾಧ್ಯಮಗಳ ವಿರುದ್ಧ ಆಕ್ರೋಶ

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮಿರ್ ಪೋಸ್ಟರ್ ಹಿಡಿದಿದ್ದ ನಳಿನಿ ಮಂಗಳವಾರ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಳು. ಈ ವೇಳೆ ನ್ಯಾಯಾಲಯದ ಹೊರಭಾಗದಲ್ಲಿದ್ದ ಮಾಧ್ಯಮದವರನ್ನು ಕಂಡು ರಂಪಾಟ ನಡೆಸಿದ್ದು, ಮಾಧ್ಯಮದವರನ್ನು ಕಂಡು ಕೆಂಡಾಮಂಡಲವಾಗಿದ್ದಾಳೆ.

ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ನ್ಯಾಯಾಲಯದ ಮುಂಭಾಗ ನಳಿನಿ ತಂದೆ ಮಾರ್ಗ ಬದಲಿಸಿದ್ದಾರೆ. ಈ ವೇಳೆ ತಂದೆ ಮೇಲೆಯೇ ಆಕ್ರೋಶ ಹೊರಹಾಕಿ, ರಸ್ತೆಯಲ್ಲೇ ಕುಳಿತಿದ್ದಾಳೆ. ನಳಿನಿಯನ್ನು ಸಮಾಧಾನ ಮಾಡಲು ತಂದೆ ಬಾಲಕುಮಾರ್ ಮುಂದಾದಾಗ ನಳಿನಿ ನಾವ್ಯಾಕೆ ಮಾಧ್ಯಮದವರ ಮುಂದೆ ಹೋಗಬೇಕು? ಅವರಿಗಾಗಿ ನಾವ್ಯಾಕೆ ದಾರಿ ಬದಲಿಸಬೇಕು ಎಂದು ಕೋಪದಿಂದಲೇ ಹೇಳಿದ್ದಾಳೆ.

ನಂತರ ಮತ್ತೆ ಕ್ಯಾಮೆರಾಗಳ ಮುಂದೆಯೇ ನಡೆದು ಬಂದು, ನಮಗೆ ಖಾಸಗಿತನ ನೀಡಿ ಎಂದು ಕೂಗಾಡಿದ್ದಾಳೆ. ಇತ್ತೀಚೆಗೆ ಪೊಲೀಸರ ವಿಚಾರಣೆ ಬಳಿಕ ಸಹ ಮಾಧ್ಯಮಗಳ ವಿರುದ್ಧ ಆಕ್ರೋಶಗೊಂಡಿದ್ದ ನಳಿನಿ, ನನ್ನ ಹೇಳಿಕೆಯನ್ನು ಪತ್ರಿಕೆ, ವಿಡಿಯೋ ಮೂಲಕ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಏನನ್ನೂ ಹೇಳುವುದಿಲ್ಲ ಎಂದು ಕಿಡಿಕಾರಿದ್ದಳು.

ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಹಿಡಿದಿದ್ದ ವಿದ್ಯಾರ್ಥಿನಿಯನ್ನು ಪೊಲೀಸರು ಇತ್ತೀಚೆಗೆ ಸತತ 7 ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು.

ವಿಚಾರಣೆಯಲ್ಲಿ ಒಟ್ಟು 80 ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹೊರತುಪಡಿಸಿ ಎಲ್ಲ ಪ್ರಶ್ನೆಗಳಿಗೂ ನಳಿನಿ ಉತ್ತರಿಸಿದ್ದಾಳೆ. ಸದ್ಯಕ್ಕೆ ಮೊದಲ ಹಂತದ ವಿಚಾರಣೆ ಮುಗಿದಿದ್ದು, ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿತ್ತು.

ವಿಚಾರಣೆ ಬಳಿಕ ಹೊರ ಬಂದ ನಳಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಳು. ನಾನು ನನ್ನ ಹೇಳಿಕೆಯನ್ನು ಪತ್ರಿಕೆ ಹಾಗೂ ವಿಡಿಯೋ ಮೂಲಕ ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ. ಬೇರೆ ಏನು ಕೇಳಬೇಡಿ. ನಾನು ಏನನ್ನೂ ಹೇಳುವುದಿಲ್ಲ. ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ. ಮತ್ತೇನು ಹೇಳುವುದಿಲ್ಲ ಎಂದಿದ್ದಳು.

Share This Article
Leave a Comment

Leave a Reply

Your email address will not be published. Required fields are marked *