ಉಡುಪಿಯ ಹೆಜಮಾಡಿ ತೀರದಲ್ಲಿ ಗೋಲಾಯಿ ಮೀನಿನ ಸುಗ್ಗಿ – ಪುಕ್ಕಟೆಯಾಗೆ ಹೊತ್ತೊಯ್ದ ಮೀನುಪ್ರಿಯರು!

Public TV
2 Min Read

ಉಡುಪಿ: ಮೀನುಗಳನ್ನು ಬಲೆ ಎಸೆದು ಇಲ್ಲವೇ ಗಾಳ ಹಾಕಿ ಹಿಡಿಯುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರತೀರಕ್ಕೆ ವರ್ಷಕ್ಕೊಮ್ಮೆ ಸಾಗರೋಪಾದಿಯಲ್ಲಿ ಬಂದು ಬೀಳುವ ಗೋಲಾಯಿ ಮೀನುಗಳನ್ನು ಬಾಜಿಕೊಳ್ಳುವ ಮೂಲಕ ಸ್ಥಳೀಯರು ಸಂಭ್ರಮಾಚರಣೆ ಮಾಡಿದ್ದಾರೆ.

ಬುಧವಾರ ಹೆಜಮಾಡಿ ತೀರದಲ್ಲಿ ಅಕ್ಷರಶಹ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಸಮುದ್ರದಲೆಗಳೊಂದಿಗೆ ದಡಕ್ಕೆ ಬಂದ ರಾಶಿ ರಾಶಿ ಗೋಲಾಯಿ ಮೀನುಗಳು ಮೀನುಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು.

ಪ್ರತೀ ವರ್ಷ ಮೀನುಗಳು ದಡಕ್ಕೆ ಅಪ್ಪಳಿಸುವುದು ಸಾಮಾನ್ಯ, ಆದರೆ ಈ ಬಾರಿ ಟನ್ ಗಟ್ಟಲೆ ಗೋಲಾಯಿ ಮೀನಿನ ರಾಶಿ ಬಿದ್ದಿದ್ದು, ಕಿಲೋಮೀಟರ್ ಗಳವರೆಗೆ ಮೀನಿನ ರಾಶಿ ದಡಕ್ಕೆ ಅಪ್ಪಳಿಸಿತ್ತು. ದಡಕ್ಕೆ ಬಂದಿದ್ದ ಮೀನುಗಳನ್ನು ಜನರು ಬುಟ್ಟಿ, ಗೋಣಿ, ರಿಕ್ಷಾ, ಟೆಂಪೋ ಹಾಗೂ ವ್ಯಾನುಗಳಲ್ಲಿ ಬಾಚಿಕೊಂಡು ಕೊಂಡೊಯ್ದಿದ್ದಾರೆ. ಈ ಬಾರಿ ಭಾರೀ ಪ್ರಮಾಣದಲ್ಲಿ ಮೀನು ಸಿಕ್ಕಿರುವುದರಿಂದ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮೀನುಗಾರ ಸಮುದಾಯದ ಯುವ ಮುಖಂಡ ಸೂರಜ್ ಸಾಲಿಯಾನ್, ಯಾವಾಗಲೂ ಸಮುದ್ರ ತಟದ ಕೈರಂಪಣಿಯಲ್ಲಿ ಬಲೆ ಹಾಕಿ ಮೀನುಗಾರಿಕೆ ಮಾಡುತ್ತಲೇ ಇರುತ್ತೇವೆ. ಅದೃಷ್ಟ ಚೆನ್ನಾಗಿದ್ದರೆ ಬಲೆಗೆ ಟನ್ ಗಟ್ಟಲೇ ಮೀನು ಬೀಳುತ್ತವೆ. ಇಲ್ಲವಾದರೇ ಖರ್ಚಿಗೆ ಬೇಕಾದಷ್ಟೂ ಸಿಗುವುದಿಲ್ಲ. ಈ ಬಾರಿ ಹೆಜಮಾಡಿ ಪ್ರದೇಶದ ಮೀನುಗಾರರ ಅದೃಷ್ಟ ಖುಲಾಯಿಸಿದೆ. ಅಲ್ಲದೇ ಬಲೆ ಹಾಕಿದ ತಂಡದವರು ತಮಗೆ ಬೇಕಾದಷ್ಟು ಮೀನನ್ನು ಸಾಗಾಟ ಮಾಡಿ, ಉಳಿದ ಮೀನುಗಳನ್ನು ತೀರದಲ್ಲೇ ಬಿಡುತ್ತಾರೆ ಎಂದು ಹೇಳಿದ್ದಾರೆ.

 

ಸ್ಥಳೀಯರಾದ ಸಂದೀಪ್ ಎಂಬವರು ಮಾತನಾಡಿ, ಮೀನುಗಾರರು ತೀರದಲ್ಲಿ ಬಿಟ್ಟು ಹೋಗುವ ಹೆಚ್ಚುವರಿ ಮೀನುಗಳನ್ನು ಸ್ಥಳೀಯರು ಹಾಗೂ ಸಮುದ್ರ ತೀರಕ್ಕೆ ಬರುವ ಪ್ರವಾಸಿಗರು ತಮಗೆ ಬೇಕಾದಷ್ಟನ್ನು ಉಚಿತವಾಗಿ ತೆಗೆದುಕೊಂಡು ಹೋಗುತ್ತಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಾನೂ ಸಹ ಶಿರ್ವದಿಂದ ಬಂದು, ಒಂದು ಚೀಲ ಗೋಲಾಯಿ ಮೀನನ್ನು ತುಂಬಿಸಿಕೊಂಡಿದ್ದೇನೆ. ಇದೂವರೆಗೂ ಈ ರೀತಿ ಭಾರೀ ಪ್ರಮಾಣದ ಮೀನನ್ನು ಹೆಜಮಾಡಿ ತೀರದಲ್ಲಿ ನಾನು ಕಂಡಿದ್ದೇ ಇಲ್ಲ. ಅಲ್ಲದೇ ಈ ಗೋಲಾಯಿ ಮೀನು ಫಿಶ್‍ಫ್ರೈಗೆ ಹೇಳಿ ಮಾಡಿಸಿದ ಮೀನು. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಬೇಸಿಗೆಯಾಗಿದ್ದರೆ ಇದನ್ನು ಒಣಗಿಸಿ ಶೇಖರಿಸಿಟ್ಟುಕೊಳ್ಳಬಹುದಾಗಿತ್ತು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *