ಮಹಿಳಾ ಗಾರ್ಮೆಂಟ್ಸ್ ನೌಕರರಿಗೆ ಗುಡ್ ನ್ಯೂಸ್ – ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ

Public TV
2 Min Read

ಬೆಂಗಳೂರು: ಮಹಿಳಾ ಗಾರ್ಮೆಂಟ್ಸ್‌ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಕೆಲಸದ ಸ್ಥಳಗಳಿಗೆ ತೆರಳಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಿಸಿದ್ದರು. ಯೋಜನೆಯನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಕಾರಗೊಳಿಸುತ್ತಿದೆ. ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆಗಾಗಿ ಬಿಎಂಟಿಸಿ ಅರ್ಜಿಯನ್ನು ಆಹ್ವಾನಿಸಿದೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೆಂಗಳೂರು ನಗರದಲ್ಲಿ ಸುಮಾರು 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಸದರಿ ಗಾರ್ಮೆಂಟ್ಸ್‌ಗಳಲ್ಲಿ ಸುಮಾರು 3 ಲಕ್ಷಕ್ಕಿಂತಲೂ ಹೆಚ್ಚಿನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.80 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದರಿ ಮಹಿಳಾ ನೌಕರರು ನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಹೋಗಲು ಹಾಗೂ ವಾಸಸ್ಥಳಕ್ಕೆ ಹಿಂದಿರುಗಲು ಖಾಸಗಿ ಬಸ್ಸು, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕಂಡುಬಂದಿರುತ್ತದೆ.

ತತ್ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಹಾಗೂ ಆರ್ಥಿಕ ಸಹಾಯವನ್ನು ಮಾಡಲು ‘ವನಿತಾ ಸಂಗಾತಿ’ ಯೋಜನೆಯಡಿ ಉಚಿತವಾಗಿ ಮಾಸಿಕ ಬಸ್‌ ಪಾಸುಗಳನ್ನು ಜನವರಿ 22 ರಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

ಪಾಸು ಪಡೆಯಲು ಅನುಸರಿಸಬೇಕಾದ ವಿಧಾನಗಳೇನು..?
* ವನಿತಾ ಸಂಗಾತಿ ಪಾಸು ಪಡೆಯಲಿಚ್ಚಿಸುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು, ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್‌ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸುವುದು.

* ಗಾರ್ಮೆಂಟ್ಸ್‌ ಮಾಲೀಕರು ಪಾಸು ಪಡೆಯಲಿಚ್ಚಿಸುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್‌ ವಿಳಾಸ welfarecommissioner123@gmail.com ಗೆ ಸಲ್ಲಿಸುವುದು.

* ವನಿತಾ ಸಂಗಾತಿ ಪಾಸಿಗಾಗಿ ಗಾರ್ಮೆಂಟ್ಸ್‌ ಮಾಲೀಕರಿಂದ ಸ್ವೀಕರಿಸುವ ಕೋರಿಕೆಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯವರು ಪರಿಶೀಲಿಸಿ, ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬೆಂಗಳೂರು ಸಾರಿಗೆ ಸಂಸ್ಥೆಗೆ ಒದಗಿಸುವುದು.

* ಬೆಂಗಳೂರು ನಗರ ಸಾರಿಗೆ ಸಂಸ್ಥೆಯು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್‌ ಮಾಲೀಕರಿಂದ ದಾಖಲೆಗಳ ಪ್ರತಿಗಳನ್ನು (ಹಾರ್ಡ್‌ ಕಾಫಿ) ಹಾಗೂ ಗಾರ್ಮೆಂಟ್ಸ್‌ ಮಾಲೀಕರ ಪಾಲಿನ ಮೊತ್ತ ಶೇ.40 ರಷ್ಟನ್ನು ಪಡೆದು (ಆರ್‌.ಟಿ.ಜಿ.ಎಸ್‌/ ಎನ್.ಇ.ಎಫ್‌.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್‌ ನಿಲ್ದಾಣ ಪಾಸು ಕೌಂಟರ್‌ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಮತಾಂತರಗೊಂಡ ಹೆಣ್ಣುಮಕ್ಕಳ ಪರಿಸ್ಥಿತಿ ಗೊತ್ತಿಲ್ಲ: ಕೆ.ಎಸ್ ಈಶ್ವರಪ್ಪ

* ವನಿತಾ ಸಂಗಾತಿ ಪಾಸುಗಳನ್ನು ಪಡೆಯುವ ಗಾರ್ಮೆಂಟ್ಸ್‌ ಮಹಿಳಾ ಕಾರ್ಮಿಕರು ಬೆಂ.ಮ.ಸಾ.ಸಂಸ್ಥೆಯ ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯುವುದು, ವನಿತಾ ಸಂಗಾತಿ ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

* ಗಾರ್ಮೆಂಟ್ಸ್‌ ಮಾಲೀಕರು ಜನವರಿ 2022ರ ಮಾಹೆಗೆ ಅವಶ್ಯವಿರುವ ವನಿತಾ ಸಂಗಾತಿ ಪಾಸುಗಳ ಬೇಡಿಕೆಯನ್ನು ಇಂದಿನಿಂದ ಕಾರ್ಮಿಕ ಇಲಾಖೆಗೆ (welfarecommissioner123@gmail.com )ಸಲ್ಲಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *