ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

Public TV
2 Min Read

ಮಂಡ್ಯ: ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಹೆಸರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನಲ್ಲಿ ವ್ಯಕ್ತಿಯೊಬ್ಬ ವಂಚನೆ ಎಸಗಿರುವ ಆರೋಪವಿದೆ.

ಅಪರಿಚಿತ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಆತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಳವಳ್ಳಿಯ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪೋಸ್ಟರ್ ವೈರಲಾಗಿತ್ತು. ಪೋಸ್ಟರ್‌ನಲ್ಲಿ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 4 ಲಕ್ಷ ರೂ., ತೃತೀಯ 3 ಲಕ್ಷ ರೂ., ನಾಲ್ಕನೇ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಎಂದು ನಮೂದಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 10 ಸಾವಿರ ರೂ. ಪ್ರವೇಶ ಶುಲ್ಕ, ಮುಂಗಡ 3500 ರೂ. ನೀಡಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ನ.20 ರಂದು ಬೆಳಗ್ಗೆ 8 ಗಂಟೆಗೆ ಮಳವಳ್ಳಿಯಲ್ಲಿ ಸ್ಪರ್ಧೆ ನಡೆಯುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಇಂದು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ

ಪೋಸ್ಟರ್‌ನಲ್ಲಿ ನಂಬರ್ ಹಾಕಿ ವಂಚಿಸಿದ್ದು, ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಪ್ಪು ಹೆಸರಲ್ಲಿ ಕೋಟ್ಯಂತರ ಜನರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡುತ್ತಿದ್ದಾನೆ. ಡಾ.ರಾಜ್ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಸ್ಪರ್ಧಾಳುಗಳಿಗೆ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದಾನೆ.

ಮುಂಗಡ ಹಣ ನೀಡಿ ಯಾರೂ ಮೋಸ ಹೋಗಬಾರದು ಎಂದು ಜನರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ರಾಶಿರಾಪು ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸ್ಪರ್ಧೆ ಆಯೋಜಿಸಿರುವುದಾಗಿ ಪೋಸ್ಟರ್ ಬಿಡುಗಡೆ ಮಾಡಿರುವ ವ್ಯಕ್ತಿ ಬಗ್ಗೆ ಮಾಹಿತಿಯೇ ಇಲ್ಲ.

ಅಪ್ಪು ಹೆಸರಿಗೆ ಕಳಂಕ ತರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಶಿರಾಪು ಸೇನಾ ಸಮಿತಿ ಅಧ್ಯಕ್ಷ ಚಿಕ್ಕಣ್ಣ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿ ಬೈಪಾಸ್ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು – ಛಿದ್ರ ಛಿದ್ರವಾದ ದೇಹಗಳು

Share This Article