ಒಂದು ತಿಂಗಳ ಒಳಗೆ ಫ್ರೆಂಚ್‌ ಪ್ರಧಾನಿ ಪಟ್ಟದಿಂದ ಇಳಿದ ಲೆಕೋರ್ನು – 3 ವರ್ಷದಲ್ಲಿ 7 ಮಂದಿ ರಾಜೀನಾಮೆ

Public TV
2 Min Read

ಪ್ಯಾರಿಸ್: ಮೂರು ವಾರಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ಫ್ರಾನ್ಸ್‌ (France) ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು (Sebastien Lecornu) ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಸೋಮವಾರ ಲೆಕೋರ್ನು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ರಕ್ಷಣಾ ಸಚಿವರಾಗಿದ್ದ 39 ವರ್ಷದ ಲೆಕೋರ್ನು ಸೆ.9 ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸೆಬಾಸ್ಟಿಯನ್ ಲೆಕೋರ್ನು ಹೊಸ ಕ್ಯಾಬಿನೆಟ್‌ ಘೋಷಣೆ ಮಾಡಿ ಸೋಮವಾರ ಪ್ರಥಮ ಸಭೆ ನಡೆಸಬೇಕಿತ್ತು. ಆದರೆ ಹೊಸ ಕ್ಯಾಬಿನೆಟ್‌ಗೆ ಆಡಳಿತ ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 3 ವರ್ಷಗಳಲ್ಲಿ ಫ್ರಾನ್ಸ್‌ನಲ್ಲಿ ಏಳು ಪ್ರಧಾನಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ರಾಜೀನಾಮೆ ಯಾಕೆ?
ಫ್ರಾನ್ಸ್‌ ಸಂಸತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಸದ್ಯ ಫ್ರಾನ್ಸ್‌ನಲ್ಲಿ ಅಲ್ಪಮತದ ಸರ್ಕಾರವಿದೆ. 2026ರಲ್ಲಿ ಬಜೆಟ್ ಮಂಡಿಸಬೇಕಿದ್ದು, ಅದಕ್ಕೆ ಬಹುಮತದ ಅಂಗೀಕಾರ ಪಡೆಯಬೇಕಿದೆ. ಬಜೆಟ್‌ಗೆ ಅಂಗೀಕಾರ ಪಡೆಯಲು ವಿಫಲವಾದ ಬೆನ್ನಲ್ಲೇ ಸೆಬಾಸ್ಟಿಯನ್ ಲೆಕೋರ್ನು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೊದಲಿದ್ದ ಪ್ರಧಾನಿಗಳಿಗೆ ಮಿತ್ರ ಕೂಟದಿಂದ ಬೆಂಬಲ ಸಿಗದ ಕಾರಣ ಅವರು ರಾಜೀನಾಮೆ ಸಲ್ಲಿಸಿದ್ದರು.  ಇದನ್ನೂ ಓದಿ:  ಅಮೆಜಾನ್‌ ಕಾಡಿನ ಮರಗಳು ದಪ್ಪ ಆಗ್ತಿವೆಯಂತೆ – ಇದು ಗುಡ್‌ ನ್ಯೂಸ್‌ or ಬ್ಯಾಡ್‌ ನ್ಯೂಸ್?

ಎಡಪಂಥೀಯರ ಕೂಟ ಅಧ್ಯಕ್ಷರ ಚುನಾವಣೆಗೆ ಆಗ್ರಹಿಸುತ್ತಿದ್ದರೆ ಬಲಪಂಥೀಯರ ಆರ್‌ಎನ್ ಕೂಟವು ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆಗ್ರಹಿಸುತ್ತಿದೆ. ಆದರೆ ಮ್ಯಾಕ್ರನ್ 2027ರವರೆಗೆ ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವುದು ಅನುಮಾನ. ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಪಡೆಯದಿರುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಮುಂದಿನ ಅಧ್ಯಕ್ಷೀಯ ಚುನಾವಣೆ ನಡೆಯುವ 2027 ರವರೆಗೆ ರಾಜಕೀಯ ಅಸ್ಥಿರತೆ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ.

ಫ್ರಾನ್ಸ್‌ನ ಸಾರ್ವಜನಿಕ ಸಾಲವು (Debt) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಫ್ರಾನ್ಸ್‌ನ ಸಾಲ-ಜಿಡಿಪಿ ಅನುಪಾತವು ಈಗ ಗ್ರೀಸ್ ಮತ್ತು ಇಟಲಿಯ ನಂತರ ಯುರೋಪಿಯನ್ ಒಕ್ಕೂಟದ ಮೂರನೇ ಅತ್ಯಧಿಕವಾಗಿದೆ ಮತ್ತು ಯುರೋಪಿಯನ್‌ ನಿಯಮಗಳ ಅಡಿಯಲ್ಲಿ ಅನುಮತಿಸಲಾದ 60 ಪ್ರತಿಶತಕ್ಕಿಂತ ಎರಡು ಪಟ್ಟು ಹತ್ತಿರದಲ್ಲಿದೆ.

ಕೋವಿಡ್‌ ಬಳಿಕ ಫ್ರಾನ್ಸ್‌ ಸಾಲದ ಸುಳಿಗೆ ತಲುಪಿದೆ. ದೇಶದಲ್ಲಿ ದುಡಿಯುವ ಯುವ ಜನತೆ ಪ್ರಮಾಣ ಕಡಿಮೆ ಇದ್ದರೆ ಪಿಂಚಣಿ ಪಡೆಯುವ ಹಿರಿಯರ ಸಂಖ್ಯೆ ಹೆಚ್ಚಾಗಿದ್ದಾರೆ. ಕೋವಿಡ್‌ ಬಳಿಕ ಸರ್ಕಾರದ ಖರ್ಚು ಹೆದ್ದಾಗಿದ್ದು ಆದಾಯ ಕಡಿಮೆಯಿದೆ. ಹೀಗಾಗಿ ವಿಪರೀತ ಪ್ರಮಾಣದಲ್ಲಿ ಸಾಲ ಮಾಡಿದ್ದರಿಂದ ಈಗ ಫ್ರಾನ್ಸ್‌ ಆರ್ಥಿಕ ಸಮಸ್ಯೆಗೆ ಸಿಲುಕಿದೆ.

Share This Article