ಆರ್ಥಿಕ ಅವ್ಯವಸ್ಥೆ – ಫ್ರಾನ್ಸ್‌ನಲ್ಲೂ ಕಟ್ಟೆಯೊಡೆದ ಜನಾಕ್ರೋಶ, ಬೀದಿಗಿಳಿದು ಪ್ರತಿಭಟನೆ; 200 ಮಂದಿ ಅರೆಸ್ಟ್‌

Public TV
2 Min Read

– ಪೊಲೀಸರು-ಪ್ರತಿಭಟನಾಕಾರರ ನಡುವೆ ಘರ್ಷಣೆ

ಪ್ಯಾರಿಸ್‌: ನೇಪಾಳದ ಬಳಿಕ ಫ್ರಾನ್ಸ್‌ನಲ್ಲಿ ಈಗ ಸರ್ಕಾರದ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆದಿದೆ. ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ರಸ್ತೆ ತಡೆದು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಸುಮಾರು 200 ಮಂದಿ ಬಂಧಿಸಿರುವುದಾಗಿ ಫ್ರಾನ್ಸ್‌ನ ಗೃಹ ಸಚಿವರು ತಿಳಿಸಿದ್ದಾರೆ.

ನೇಪಾಳದ ಬಳಿಕ ಈಗ ಫ್ರಾನ್ಸ್‌ನಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸಿ ಜನ ಬೀದಿಗಿಳಿದಿದ್ದಾರೆ. ಎಮ್ಯಾನುಯೆಲ್‌ ಮ್ಯಾಕ್ರನ್‌ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮ್ಯಾಕ್ರನ್‌ ಸರ್ಕಾರ ಜನಜೀವನ ಮಟ್ಟ ಸುಧಾರಿಸುವಲ್ಲಿ ವಿಫಲವಾಗಿದೆ, ಹಣಕಾಸು ನಿರ್ವಹಣೆ ತುಂಬಾ ಕಳಪೆಯಾಗಿದೆ ಎಂದು ಜನ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

80,000ಕ್ಕೂ ಅಧಿಕ ಪೊಲೀಸರ ನಿಯೋಜನೆ
ಪ್ರತಿಭಟನೆ ಹತ್ತಿಕ್ಕಲು ಮ್ಯಾಕ್ರನ್‌ ಸರ್ಕಾರ ದೇಶಾದ್ಯಂತ 80,000ಕ್ಕೂ ಅಧಿಕ ಪೊಲೀಸರನ್ನ ನಿಯೋಜಿಸಿದೆ. ಆದ್ರೆ ಪರಿಸ್ಥಿತಿ ಕೈಮೀರಿದ್ದು, ವಿವಿಧೆಡೆ ಪೊಲೀಸರು ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿದೆ. ಪ್ಯಾರಿಸ್‌ನಾದ್ಯಂತ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಲು ಯತ್ನಿಸುತ್ತಿದ್ದಾರೆ.

ಪ್ರತಿಭಟನೆ ಶುರುವಾಗಿದ್ದು ಏಕೆ ಮತ್ತು ಹೇಗೆ?
ಸೋಮವಾರ ಫ್ರಾಂಕೋಯಿಸ್‌ ಬೇರೂ ಸಂಸತ್ತಿನಲ್ಲಿ ವಿಶ್ವಾಸಮತ ಕಳೆದುಕೊಂಡರು. ಸಾರ್ವಜನಿಕ ರಜಾದಿನಗಳನ್ನ ಕಡಿತಗೊಳಿಸುವುದು, ಪಿಂಚಣಿ ಸ್ಥಗಿತಗೊಳಿಸುವುದು ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನ ಅನುಷ್ಠಾನಕ್ಕೆ ತರಲು ಮುಂದಾಗಿದ್ದರು. ಆದ್ರೆ ಸಂಸತ್ತಿನಲ್ಲಿ ವಿಶ್ವಾಸ ಕಳೆದುಕೊಂಡ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯ್ತು. ಇದಾದ ಮರುದಿನ ಅಂದ್ರೆ ಮಂಗಳವಾರ ಮ್ಯಾಕ್ರನ್‌ ತನ್ನ ನಿಷ್ಠಾವಂತ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅವರನ್ನೇ ನೂತನ ಪ್ರಧಾನಿಯನ್ನಾಗಿ ನೇಮಿಸಿದರು. ಲೆಕೋರ್ನು ಕಳೆದ 1 ವರ್ಷದಲ್ಲಿ ನೇಮಕವಾದ ನಾಲ್ಕನೇ ಪ್ರಧಾನಿ. ಹೀಗೆ ಕಳೆದ 12 ತಿಂಗಳಲ್ಲಿ ನಡೆದ ತ್ವರಿತ ರಾಜಕೀಯ ಬದಲಾವಣೆಗಳು ಹಾಗೂ ರಾಜೀನಾಮೆಗೂ ಮುನ್ನ ಬೇರೂ ಅವರ ಆರ್ಥಿಕ ನೀತಿಗಳು ಪ್ರತಿಭಟನೆಗೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ ಕಳೆದ ಬೇಸಿಗೆಯಲ್ಲಿ‌ ಹುಟ್ಟಿಕೊಂಡ ʻಬ್ಲ್ಯಾಕ್‌ ಎವೆರಿಥಿಂಗ್‌ʼ (ಎಲ್ಲವನ್ನೂ ನಿಲ್ಲಿಸಿ) ಎಂಬ ಪೋಸ್ಟ್‌ ಬೆಳಕಿಗೆ ಬಂದ ಬಳಿಕ ಈ ಚಳವಳಿ ಹುಟ್ಟಿಕೊಂಡಿತು. ಈ ಚಳವಳಿಕೆ ನಿರ್ದಿಷ್ಟ ನಾಯಕತ್ವವಿಲ್ಲ ಎನ್ನುತ್ತಿವೆ ವರದಿಗಳು.

Share This Article