ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರ ಹತ್ಯೆ

Public TV
2 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 3 ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.

ಕಳೆದ 12 ಗಂಟೆಗಳಲ್ಲಿ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರೀ ಕಾರ್ಯಾಚರಣೆಯನ್ನು ಆರಂಭಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ಬೆಳಗ್ಗೆ ಕಾಶ್ಮೀರದ ಪುಲ್ವಾಮಾ, ಗಂದರ್‌ಬಾಲ್ ಮತ್ತು ಹಂದ್ವಾರ ಪ್ರದೇಶದಲ್ಲಿ ಮೂರು ಪ್ರತ್ಯೇಕ ಎನ್‍ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಹಲವು ಕಾರ್ಯಾಚರಣೆಗಳನ್ನು ಆರಂಭಿಸಿವೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

ನಾವು ಕಳೆದ ರಾತ್ರಿ 4-5 ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಇದುವರೆಗೆ ಪುಲ್ವಾಮಾದಲ್ಲಿ ಜೆಇಎಂನ ಇಬ್ಬರು ಭಯೋತ್ಪಾದಕರು, ಗಂದರ್‌ಬಾಲ್ ಎಲ್‍ಇಟಿಯ ಒಬ್ಬ ಭಯೋತ್ಪಾದಕ, ಹಂದ್ವಾರದಲ್ಲಿ ಎಲ್‍ಇಟಿಯ ಮತ್ತೊಬ್ಬ ಭಯೋತ್ಪಾದಕ ಹತನಾಗಿದ್ದಾನೆ ಎಂದು ತಿಳಿಸಿದರು. ಎಲ್ಲಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ. ಇತರ ಸ್ಥಳಗಳಲ್ಲಿಯೂ ಸಂಪರ್ಕವನ್ನು ಸ್ಥಾಪಿಸಲಾಗುವುದು ಅಂತ ನಾವು ನಿರೀಕ್ಷಿಸುತ್ತಿದ್ದೇವೆ ಎಂದರು.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಚೆವಾಕಲನ್ ಗ್ರಾಮದಲ್ಲಿ ನಿನ್ನೆ ಸಂಜೆ ಮೊದಲ ಎನ್‍ಕೌಂಟರ್ ಪ್ರಾರಂಭವಾಯಿತು. ಅಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಇನ್ನೂ ಇಬ್ಬರು ಉಗ್ರರು ಅಲ್ಲಿಯೇ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಎರಡನೇ ಎನ್‍ಕೌಂಟರ್ ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಕೌಬಾಗ್ ನುನಾರ್ ಪ್ರದೇಶದಲ್ಲಿ ನಡೆದಿದ್ದು, ಅಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಎಲ್‍ಇಟಿ ಭಯೋತ್ಪಾದಕನನ್ನು ಕೊಲ್ಲಲಾಯಿತು. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಇನ್ನೊಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ, ಹಂದ್ವಾರದ ರಾಜ್ವಾರ್ ಪ್ರದೇಶದ ನೆಚಮಾದಲ್ಲಿ ಎನ್‍ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು. ಎನ್‍ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

ಇದಕ್ಕೂ ಮೊದಲು, ಫೆಬ್ರವರಿ 10 ರಂದು ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲಲಾಯಿತು. ಅದರಲ್ಲಿ ಇಬ್ಬರು ಎಲ್‍ಇಟಿ ಭಯೋತ್ಪಾದಕರು ಪುಲ್ವಾಮಾದ ಬಟ್ಪೋರಾ ಪ್ರದೇಶದಲ್ಲಿ ಮತ್ತು ಶ್ರೀನಗರದ ಹಜರತ್ಬಾಲ್ ಪ್ರದೇಶದಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ತಿಳಿದು ಬಂದಿದೆ.

ಈ ವರ್ಷ ಕಾಶ್ಮೀರದಲ್ಲಿ 20 ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲಾಗಿದೆ. ಭದ್ರತಾ ಪಡೆಗಳು ಮೂವರು ಉನ್ನತ ಕಮಾಂಡರ್‍ಗಳು ಮತ್ತು 9 ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ 35 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅದಲ್ಲದೆ ಭದ್ರತಾ ಪಡೆಗಳು ಈ ವರ್ಷ 16 ಸಕ್ರಿಯ ಭಯೋತ್ಪಾದಕರು ಮತ್ತು ಮೂರು ಡಜನ್‍ಗಿಂತಲೂ ಹೆಚ್ಚು ಭಯೋತ್ಪಾದಕರ ಸಹಚರರನ್ನು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *