ಕಲಬುರಗಿ: ಕುಡಿತದ ಚಟ ಬಿಡಿಸಲು ನಕಲಿ ವೈದ್ಯನಿಂದ (Fake Doctor) ಚಿಕಿತ್ಸೆ ಪಡೆದು ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಸೇಡಂ (Sedam) ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮಿ, ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ಮೃತ ದುರ್ದೈವಿಗಳು. ನಕಲಿ ವೈದ್ಯ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್
ಮದ್ಯವ್ಯಸನಿಗಳಾಗಿದ್ದ ಲಕ್ಷ್ಮಿ, ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ತಮ್ಮ ಕುಟುಂಬಸ್ಥರೊಂದಿಗೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮಕ್ಕೆ ಬಂದಿದ್ದರು. ಇಮಡಾಪುರ ಗ್ರಾಮದ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಎಂಬ ವ್ಯಕ್ತಿ ಮದ್ಯವ್ಯಸನಿಗಳಿಗೆ ಕುಡಿತದ ಚಟ ಬಿಡಿಸೋಕೆ ನಾಟಿ ಔಷಧಿ ನೀಡುತ್ತಿದ್ದ. ಕಳೆದ ಹಲವು ವರ್ಷಗಳಿಂದ ನಾಟಿ ಔಷಧಿ ನೀಡುತ್ತಾ ಫೇಮಸ್ ಆಗಿದ್ದ. ಇದನ್ನೂ ಓದಿ: ಘಾನಾದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ಸಚಿವರು ಸೇರಿ 8 ಮಂದಿ ಸಾವು
ಹೀಗಾಗಿ, ಆ. 6ರಂದು ಶಹಬಾದ ಪಟ್ಟಣದ ಗಣೇಶ್ ರಾಠೋಡ್, ನಾಗೇಶ್, ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ತಾಂಡಾ ನಿವಾಸಿ ಮನೋಹರ್ ಮತ್ತು ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ, ತನ್ನ ಪುತ್ರ ನಿಂಗಪ್ಪನೊಂದಿಗೆ ಬಂದಿದ್ದರು. ಸಾಯಪ್ಪ ಔಷಧಿಯನ್ನು ಮೂಗಿಗೆ ಹಾಕುತ್ತಿದ್ದಂತೆ ಎಲ್ಲರಿಗೂ ವಾಂತಿ ಶುರುವಾಗಿತ್ತು. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿದ್ದರು. ಆದರೆ ಅಷ್ಟರಲ್ಲಾಗಲೇ ಲಕ್ಷ್ಮೀ ಮತ್ತು ಗಣೇಶ್ ರಾಠೋಡ್, ನಾಗೇಶ್ ಹಾಗೂ ಮನೋಹರ್ ಮೃತಪಟ್ಟಿದ್ದಾರೆ. ವಾಂತಿಯಿಂದ ತೀವ್ರವಾಗಿ ಬಳಲುತ್ತಿದ್ದ ನಿಂಗಪ್ಪನನ್ನ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಚಿಕಿತ್ಸೆ ಪಡೆಯುತ್ತಿದ್ದ ನಿಂಗಪ್ಪ ಹಾಗೂ ಕುಟುಂಬಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇನ್ನೂ ಘಟನೆ ಬಳಿಕ ತೆಲಂಗಾಣದ ತಂಗಿಯ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಸಾಯಪ್ಪನನ್ನು ಸೇಡಂ ಪೊಲೀಸರು (Sedam Police) ಬಂಧಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.