ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

Public TV
2 Min Read

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಓಮ್ನಿ ಕಾರಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

ಮಧ್ಯರಾತ್ರಿ ಸುಮಾರು 1.30ಗಂಟೆಗೆ ಅಪಘಾತ ಸಂಭವಿಸಿದ್ದು, ವೆಂಕಟೇಶ್, ಸತೀಶ್, ವಿಕಾಸ್ ಮತ್ತು ಸುಂದರ್ ಮೃತ ದುರ್ದೈವಿಗಳು. ಓಮ್ನಿ ಕಾರಿನಲ್ಲಿದ್ದವರು ಬೆಂಗಳೂರಿನ ಆರ್.ಟಿ ನಗರದಲ್ಲಿ ಫ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

ಪ್ಲವರ್ ಡೆಕೋರೇಷನ್ ಮಾಡುತ್ತಿದ್ದ ಯುವಕರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಅಂತ ನಂದಿ ಬೆಟ್ಟದ ಕಡೆಗೆ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಓಮ್ನಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಮೂವರು ಸಹ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತಕ್ಕೆ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಬೇಜವಾಬ್ದಾರಿತನವೇ ಕಾರಣ ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಿರುವ ಅಧಿಕಾರಗಳು ಏರ್ ಪೋರ್ಟ್ ಟೋಲ್ ಮುಗಿದ ನಂತರ ಉತ್ತಮ ರಸ್ತೆ ಮಾಡಿಲ್ಲ. ಹೈದರಾಬಾದ್ ಕಡೆಯ ಟೋಲ್ ಮುಗಿದ ನಂತರ ಕನ್ನಮಂಗಲಪಾಳ್ಯ ಗೇಟ್ ಬಳಿ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಮೇಲೆ ನೂತನವಾಗಿ ಡಾಂಬರೀಕರಣ ಮಾಡಲಾಗಿದೆ. ಹೀಗಾಗಿ ಡಾಂಬರೀಕರಣ ಮಾಡಿರುವ ಪರಿಣಾಮ ಹೆದ್ದಾರಿ ಮಧ್ಯದ ಡಿವೈಡರ್ ಸಮತಟ್ಟಾಗಿದ್ದು ಎರಡು ಬದಿಯ ರಸ್ತೆಗಳು ಒಂದೇ ಸಮನಾಗಿವೆ.

ಮೇಲ್ಸುತುವೆ ಮೇಲೆ 6 ಪಥದ ರಸ್ತೆ ಇದಾಗಿದ್ದು ಸಾಕಷ್ಟು ವಿಶಾಲವಾಗಿದೆ. ಡಾಂಬರೀಕರಣ ಕಡು ಕಪ್ಪಾಗಿದ್ದು, ವಾಹನಗಳ ಹೆಡ್ ಲೈಟ್ ಎಷ್ಟೇ ಇದ್ದರೂ ಮುಂದಿನ ವಾಹನಗಳು ಬಹಳ ಹತ್ತಿರ ಬರುವವರೆಗೂ ಬಹುಬೇಗ ಕಾಣುವುದಿಲ್ಲ. ಇದರ ಜೊತೆಗೆ ಕತ್ತಲಲ್ಲಿ ಹೊಳೆಯುವ ರೇಡಿಯಂ ಸ್ಟಿಕರ್ ಮಾರ್ಗ ಸೂಚಿಗಳನ್ನ ಸಹ ಇಲ್ಲಿ ಅಳವಡಿಸಿಲ್ಲ. ಹೀಗಾಗಿ ಈ ಸ್ಥಳದಲ್ಲೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ.

ಕಳೆದ ರಾತ್ರಿಯೂ ಸಹ ಇದೇ ರೀತಿ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರು ಕಾಣದೆ ಹಿಂಬದಿಯಲ್ಲಿ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಈ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *