ಬಾಣಂತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿ

Public TV
1 Min Read

ಹೈದರಾಬಾದ್: ತೆಲಂಗಾಣದಲ್ಲಿ ಮಾರಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದ್ದು, ಕೇವಲ 15 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿಯಾಗಿದ್ದಾರೆ.

ಮಂಚೇರಿಯಲ್ ಜಿಲ್ಲೆಯ ನಿವಾಸಿಗಳಾದ ರಾಜಗಟ್ಟು, ಪತ್ನಿ ಸೋನಿ(28), ಲಿಂಗಯ್ಯ, ಮಗಳು ಶ್ರೀವರ್ಷಿಣಿ ಮೃತ ದುರ್ದೈವಿಗಳು. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಗಟ್ಟು ಅವರು ಕಳೆದ 15 ದಿನಗಳ ಹಿಂದೆ ಡೆಂಗ್ಯೂ ಜ್ವರದಿಂದ ಪ್ರಾಣಬಿಟ್ಟಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜಗಟ್ಟು ಅವರು ಅಕ್ಟೋಬರ್ 16ರಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು. ರಾಜಗಟ್ಟು ಅವರು ನಿಧನರಾದ 5 ದಿನಗಳ ಬಳಿಕ ಸೋನಿ ಅವರ ತಾತ ಲಿಂಗಯ್ಯ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರು.

ಈ ಎರಡು ಸಾವುಗಳ ನೋವಿನಿಂದ ಮನೆಮಂದಿ ಇನ್ನೂ ಹೊರಬಂದಿರಲಿಲ್ಲ, ಅಷ್ಟರಲ್ಲೇ ದೀಪಾವಳಿ ಹಬ್ಬದಂದೇ ರಾಜಗಟ್ಟು ಮಗಳು ಶ್ರೀವರ್ಷಿಣಿ ಡೆಂಗ್ಯೂ ಜ್ವರಕ್ಕೆ ಬಲಿಯಾದಳು. ಗರ್ಭಿಣಿಯಾಗಿದ್ದ ರಾಜಗಟ್ಟು ಪತ್ನಿ ಸೋನಿ ಈ ಸಾವುಗಳಿಂದ ಬಹಳಷ್ಟು ನೊಂದಿದ್ದರು, ಅವರನ್ನು ಕೂಡ ಮಾರಕ ಡೆಂಗ್ಯೂ ಬಿಡಲಿಲ್ಲ. ಮಂಗಳವಾರ ಸಿಕಂದ್ರಾಬಾದ್‍ನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಸೋನಿ ಜನ್ಮ ನೀಡಿದರು. ಆದರೆ ಹೆರಿಗೆ ಆದ ಮರುದಿನವೇ ಸೋನಿ ಮೃತಪಟ್ಟಿದ್ದಾರೆ. ಹೀಗೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿಯಾಗಿರುವುದು ವಿಷಾದನೀಯವಾಗಿದೆ.

ಕಳೆದ ವಾರ ತೆಲಂಗಾಣ ಹೈಕೋರ್ಟ್ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರದ ಹಾವಳಿಯನ್ನು ತಡೆಗಟ್ಟುವಂತೆ ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಸಿದ ದ್ವೀಸದಸ್ಯ ಪೀಠದ ನ್ಯಾಯಾಧೀಶರು, ಜನವರಿಯಲ್ಲಿ 85 ಸಂಖ್ಯೆಯಲ್ಲಿದ್ದ ಡೆಂಗ್ಯೂ ಪ್ರಕರಣಗಳು ಅಕ್ಟೋಬರ್ ವರೆಗೆ ಹೇಗೆ 3,500 ಪ್ರಕರಣವಾಯ್ತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೆ ಒಂದು ವೇಳೆ ಸರ್ಕಾರ ರಾಜ್ಯದಲ್ಲಿ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಲು ವಿಫಲವಾದರೆ, ಮಾರಕ ಡೆಂಗ್ಯೂ ಜ್ವರದಿಂದ ಸಾವನ್ನಪ್ಪುವ ರೋಗಿಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನವನ್ನು ನೀಡಬೇಕು ಎಂದು ಆದೇಶಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *