ಶ್ರೀಲಂಕಾ ಬಳಿಕ ನೇಪಾಳದಲ್ಲಿ ಸರಣಿ ಸ್ಫೋಟ – 4 ಸಾವು, ಹಲವರಿಗೆ ಗಾಯ

Public TV
1 Min Read

ಕಠ್ಮಂಡು: ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3 ಸರಣಿ ಸ್ಫೋಟಗಳು ಸಂಭವಿಸಿದ್ದು ನೇಪಾಳ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಸ್ಫೋಟದಲ್ಲಿ ಈವರೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದು, ಸ್ಫೋಟದ ಹಿಂದಿನ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದೇವೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

ಕಠ್ಮಂಡು ನಗರದ ಮಧ್ಯ ಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿತ್ತು. ಮನೆಯೊಂದರಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ನಿವಾಸಿಯೊಬ್ಬರು ಬಲಿಯಾಗಿದ್ದಾರೆ. ಸ್ಫೋಟದಿಂದಾಗಿ ಮನೆಯ ಗೋಡೆಗಳು ಕುಸಿದಿದೆ. ಇದರ ಬಳಿಕ ಕಠ್ಮಂಡು ನಗರದ ಹೊರವಲಯದಲ್ಲಿರುವ ಸುಖೇದಾದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಥಾಂಕೋಟ್ ಪ್ರದೇಶದಲ್ಲಿ ಮೂರನೇ ಸ್ಫೋಟ ನಡೆದಿದೆ.

ಈ ಮೂರು ಸ್ಫೋಟಗಳಲ್ಲಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪೊಲೀಸ್ ಅಧಿಕಾರಿ ಶ್ಯಾಮ್ ಲಾಲ್ ಗವಾಲಿಯ ಪ್ರಕಾರ, ಮಾವೋವಾದಿ ಸಂಘಟನೆಗಳಿಗೆ ಸಂಬಂಧಿಸಿದ ಕೆಲವು ಪತ್ರಗಳು ಮೊದಲ ಸ್ಫೋಟದಲ್ಲಿ ಸುಟ್ಟುಹೋಗಿದ್ದು, ಸ್ಥಳದಲ್ಲಿ ಸಿಕ್ಕ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡವಿದ್ದು, ಅವರು ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಶಂಕಿತ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸ್ಫೋಟಗಳ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ. ಅಲ್ಲದೆ ಗಾಯಗೊಂಡವರಿಗೆ ಕಠ್ಮಂಡುವಿನ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಈಸ್ಟರ್ ಭಾನುವಾರದಂದು ನೆರೆಯ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿತ್ತು. ಆಗ 290ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *