ಟಿಎಂಸಿ ಮಾಜಿ ನಾಯಕ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆ

Public TV
2 Min Read

ನವದೆಹಲಿ: ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಸೇರ್ಪಡೆಯಾಗಿ ಮಾತನಾಡಿದ ಅವರು, ಇಂದು ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗೆ ತಿಳಿದ ಮಟ್ಟಿಗೆ ಬಿಜೆಪಿ ಕೋಮುವಾದಿ ಪಕ್ಷವಲ್ಲ. ಇದೊಂದು ಜಾತ್ಯತೀತ ಪಕ್ಷವಾಗಿದ್ದು, ಮುಂದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಈ ವೇಳೆ ರವಿಶಂಕರ್ ಪ್ರಸಾದ್ ಮಾತನಾಡಿ ಮುಕುಲ್ ರಾಯ್ ಯಾವುದೇ ಷರತ್ತು ವಿಧಿಸದೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ಮುಕುಲ್ ರಾಯ್ ಸೆಪ್ಟೆಂಬರ್ 25 ರಂದು ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ ಕೆಲವೇ ಘಂಟೆಗಳಲ್ಲಿ ಟಿಎಂಸಿ ನಾಯಕ ಪಾರ್ಥ ಚಟರ್ಜಿ, ರಾಯ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವುದಾಗಿ ಆದೇಶ ಹೊರಡಿಸಿದ್ದರು.

ರಾಯ್ ಅವರ ರಾಜೀನಾಮೆಗೆ ಟಿಎಂಸಿ ಪಕ್ಷ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯಗಳೇ ಕಾರಣ ಎಂದು ತಿಳಿದು ಬಂದಿದೆ. ರಾಯ್ ಅವರು ಹಲವು ದಿನಗಳ ಮುಂಚೆಯೇ ಪಕ್ಷ ತೊರೆಯುವ ಕುರಿತು ಸೂಚನೆಯನ್ನು ನೀಡಿದ್ದರು. ಟಿಎಂಸಿ ರಾಜ್ಯಸಭಾ ನಾಯಕ ಸ್ಥಾನದಿಂದ ಇವರನ್ನು ಕೆಳಗಿಳಿಸಿತ್ತು. ಅಲ್ಲದೆ ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಸತ್ತಿನ ಸ್ಥಾಯಿ ಸಮಿತಿಯ ಮುಖ್ಯಸ್ಥ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು.

ಕಳೆದ ಕೆಲವು ದಿನಗಳ ಹಿಂದೆ ಟಿಎಂಸಿಯ ಹಿರಿಯ ನಾಯಕರೊಬ್ಬರು ಮಮತಾ ಅವರು ಪಕ್ಷದ ಹೃದಯವಾದರೆ, ರಾಯ್ ಪಕ್ಷದ ತಲೆ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಮಮತಾ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಯ್ ಪಕ್ಷದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ಚುನಾವಣೆ ವೇಳೆ ಟಿಎಂಸಿ ಅಡ್ಡಮತದಾನ ಮಾಡಿ ರಾಮನಾಥ್ ಕೋವಿಂದ್ ಬೆಂಬಲ ನೀಡಿದ್ದಕ್ಕೆ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದರು. ಈ ಚುನಾವಣೆಯ ನಂತರ ಪಕ್ಷದಲ್ಲಿ ಅಂತರಿಕ ಒಡಕು ಉಂಟಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪನೆಯಿಂದ ಅಧಿಕಾರವನ್ನು ಪಡೆಯುವ ತನಕ ಮುಕುಂದ್ ಅವರ ಕಾರ್ಯ ಮಹತ್ವ ಪೂರ್ಣವಾದ್ದು. ಮುಕುಂದ್ ಅವರ ರಾಜೀನಾಮೆಯು ಟಿಎಂಸಿಯಲ್ಲಿ ಭಾರೀ ಬದಲವಾಣೆಗೆ ಕಾರಣವಾಗಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *