`ಕೈ’ ಅಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ- ಅತೃಪ್ತರಿಂದ ಮತ್ತೊಮ್ಮೆ ರಾಜೀನಾಮೆ ಪತ್ರ ಬರೆಸಿದ ಬೋಪಯ್ಯ

Public TV
2 Min Read

– ಇಂದು ಜೊತೆಯಾಗಿ ಬಂದು ರಿಸೈನ್

ಬೆಳಗಾವಿ/ಮುಂಬೈ: ಕಾಂಗ್ರೆಸ್ ಅಸ್ತ್ರಕ್ಕೆ ಕಮಲ ಪಾಳಯ ಪ್ರತ್ಯಸ್ತ್ರ ರೂಪಿಸಿದ್ದು, ಅತೃಪ್ತ ಶಾಸಕರಿರುವ ಹೋಟೆಲ್‍ಗೆ ಇಬ್ಬರು ನಾಯಕರನ್ನು ಬಿಜೆಪಿ ಕಳಿಸಿಕೊಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾತ್ರಿಯೇ ಮುಂಬೈಯ ರೆನೈಸಾನ್ಸ್ ಹೋಟೆಲ್‍ಗೆ ಮಾಜಿ ಡಿಸಿಎಂ ಆರ್ ಅಶೋಕ್ ಹಾಗೂ ಶಾಸಕ ಕೆಜಿ ಬೋಪಯ್ಯ ತೆರಳಿದ್ದಾರೆ. ರಾತ್ರಿಯಿಡೀ ಬೋಪಯ್ಯ ಮತ್ತು ಆರ್.ಆಶೋಕ್ ಜೊತೆ ಅತೃಪ್ತರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಪೀಕರ್ ರಮೇಶ್ ಕುಮಾರ್ ಶಾಕ್ ನೀಡಿದ್ದಕ್ಕೆ ಬಿಜೆಪಿ ಮೆಗಾ ಪ್ಲಾನ್ ಮಾಡಿದ್ದು, ರಾತ್ರಿಯಿಡೀ ಕುಳಿತು ಮತ್ತೊಂದು ಬಾರಿ ರಾಜೀನಾಮೆ ಪತ್ರವನ್ನು ಬೋಪಯ್ಯ ಬರೆಸಿದ್ದಾರೆ. ಈ ಮೂಲಕ ಮಾಜಿ ಸ್ಪೀಕರ್, ವಕೀಲರೂ ಆಗಿರೋ ಬೋಪಯ್ಯರಿಂದಲೇ ಠಕ್ಕರ್ ಕೊಡಲು ಪ್ಲಾನ್ ಮಾಡಲಾಗಿದೆ.

ಡಿಕೆಶಿ ಬರುವ ಮೊದಲೇ ಅತೃಪ್ತರನ್ನು ಬೇರೆಡೆ ಸ್ಥಳಾಂತರ ಮಾಡುವ ಪ್ಲಾನ್ ಮಾಡಲಾಗಿತ್ತು. ಆದರೆ ಸಮಯ ವ್ಯರ್ಥ ಮಾಡದೇ ಬೆಂಗಳೂರಿಗೆ ಆಗಮಿಸಿ ರಾಜೀನಾಮೆಗೆ ರೆಬೆಲ್ಸ್ ಟೀಂ ನಿರ್ಧಾರ ಮಾಡಿದೆ. ವಿಶೇಷ ವಿಮಾನದಲ್ಲಿ ಆಗಮಿಸಿ ಎಲ್ಲರೂ ಒಟ್ಟಾಗಿ ರಾಜೀನಾಮೆ ನೀಡಲು ಅತೃಪ್ತರು ಸಜ್ಜಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇತ್ತ ಡಿ.ಕೆ ಶಿವಕುಮಾರ್ ಇಂದು ಮುಂಜಾನೆ ದೇವನಹಳ್ಳಿ ಏರ್‍ಪೋರ್ಟಿನಿಂದ ಸುಮಾರು 6.10ಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಡಿಕೆಶಿ ಜೊತೆ ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಶಾಸಕರು ಮುಂಬೈಗೆ ಹೊರಟಿದ್ದಾರೆ. ಶಿವಕುಮಾರ್ ಮುಂಬೈಗೆ ತೆರಳುವ ಮುನ್ನ ಸಿಎಂ ಜೊತೆ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಶಿವಕುಮಾರ್ ಆಗಮನದ ಸುದ್ದಿ ಕೇಳಿ ಬೆದರಿದ ಅತೃಪ್ತರು, ರಾತ್ರೋರಾತ್ರಿ ಪೊಲೀಸ್ ಕಮಿಷನರ್‍ಗೆ ದೂರು ಸಲ್ಲಿಸಿದ್ದಾರೆ. ಸಿಎಂ ಮತ್ತು ಡಿಕೆಶಿಯಿಂದ ನಮಗೆ ಬೆದರಿಕೆ ಇದೆ. ನಾವು ವಾಸ್ತವ್ಯ ಹೂಡಿರುವ ಹೋಟೆಲ್‍ಗೆ ಡಿಕೆಶಿ ದಾಳಿ ಮಾಡುವ ಸಾಧ್ಯತೆ ಇದೆ. ನಾವು ಹೋಟೆಲ್‍ನಲ್ಲಿ ಯಾರನ್ನೂ ಭೇಟಿ ಮಾಡಲು ಇಷ್ಟ ಪಡುವುದಿಲ್ಲ. ನಮಗೆ ಯಾರೊಂದಿಗೂ ಮಾತನಾಡುವ ಅವಶ್ಯಕತೆಯೂ ಕೂಡ ಇಲ್ಲ. ತಮ್ಮ ಖಾಸಗಿತನಕ್ಕೆ ರಕ್ಷಣೆ ಕೊಡಿ. ಡಿ.ಕೆ ಶಿವಕುಮಾರ್ ಅವರನ್ನು ಹೋಟೆಲ್ ಪ್ರವೇಶಿಸದಂತೆ ತಡೆಯಬೇಕು. ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *