ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

Public TV
2 Min Read

ನವದೆಹಲಿ: ಏಪ್ರಿಲ್ 14ರ ಬಳಿಕ ಕುಸಿದಿರುವ ಅರ್ಥವ್ಯವಸ್ಥೆಯನ್ನು ಹೇಗೆ ಪುನರ್ ಆರಂಭಿಸಬೇಕು ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಕೊರೊನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ, ದೇಶವನ್ನು 21 ದಿನ ಲಾಕ್‍ಡೌನ್ ಮಾಡಿದೆ. ಲಾಕ್‍ಡೌನ್ ನಿಂದಾಗಿ ಇಡೀ ದೇಶದ ಅರ್ಥವ್ಯವಸ್ಥೆಯೇ ಸ್ತಬ್ಧಗೊಂಡಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿವೆ. ಲಾಕ್‍ಡೌನ್ ಬಳಿಕ ಅರ್ಥವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳಬೇಕಿದೆ. ಹಾಗಾಗಿ ಅರ್ಥವ್ಯವಸ್ಥೆಯನ್ನು ರೀಸ್ಟಾರ್ಟ್ ಮಾಡಲು ಸರ್ಕಾರ ಸಹ ಕೆಲವೊಂದು ಯೋಜನೆಗಳನ್ನು ರೂಪಿಸಬೇಕಿದೆ ಎಂಬುವುದು ರಘುರಾಮ್ ರಾಜನ್ ಅಭಿಪ್ರಾಯ.

ಸೂಕ್ಷ್ಮವಾಗಿದೆ ದೇಶದ ಅರ್ಥವ್ಯವಸ್ಥೆ: 2008-09ನೇ ಸಾಲಿನ ಆರ್ಥಿಕ ಹಿಂಜರಿತಗಿಂತಲೂ ಇಂದಿನ ಸ್ಥಿತಿ ಅಪಾಯಕಾರಿಯಾಗಿದೆ. 2008-09ರಲ್ಲಿ ಅರ್ಥಿಕ ಹಿಂಜರಿತದ ನಡುವೆ ವಾಣಿಜ್ಯ ಚಟುವಟಿಕೆಗಳು ನಡೆದಿದ್ದವು. ಆದರೆ ಇಂದು ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. 2008-09ರಲ್ಲಿ ಕಂಪನಿಗಳು ತಮ್ಮ ವ್ಯವಹಾರ ನಡೆಸುತ್ತಿರೋದರಿಂದ ದೇಶವೂ ನಡೆಯುತ್ತಿತ್ತು. ಹಾಗಾಗಿ ಹಣಕಾಸಿನ ವ್ಯವಸ್ಥೆ ಆರೋಗ್ಯಕರವಾಗಿತ್ತು. ಆದ್ರೆ ಇಂದಿನ ಹಣಕಾಸಿನ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿದ್ದು, ಜಾಗೂರಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇರಿಸಬೇಕಿದೆ.

ಬಂದ್ ಮಾಡಲು ಸಾಧ್ಯವಿಲ್ಲ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಮಯವಕಾಶ ಸಿಕ್ಕಿದೆ. 21 ದಿನಗಳ ಲಾಕ್‍ಡೌನ್ ವೇಳೆಯಲ್ಲಿ ಕೊರೊನಾ ತಡೆಗೆ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಈ ಲಾಕ್‍ಡೌನ್ ಅವಧಿಯಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರಕ್ಕೆ ಅಂತ್ಯ ಹಾಡಬೇಕಿದೆ. 21 ದಿನಗಳ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಸಿಗದಿದ್ದರೆ, ಎಲ್ಲವನ್ನು ಬಂದ್ ಮಾಡಲು ಸಾಧ್ಯವಿಲ್ಲ.

21 ದಿನಗಳ ನಂತರ ಲಾಕ್‍ಡೌನ್ ನಿಯಮವನ್ನು ಸರ್ಕಾರ ಸಡಿಲಿಸಬೇಕು. ಇದರಿಂದ ಕೆಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಾಣುತ್ತದೆ. 21 ದಿನಗಳ ನಂತರ ಆರಂಭಿಸುವ ಕಂಪನಿಗಳು ಕಡ್ಡಾಯವಾಗಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಬೇಕು. ಹಾಗೆ ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿ ಹಿತದೃಷ್ಟಿಯಿಂದ ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ರಾಜನ್ ಹೇಳುತ್ತಾರೆ.

ಆರ್ಥಿಕ ಸಹಾಯ: ದೀರ್ಘ ಕಾಲಾವಧಿಯವರೆಗೆ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಸರ್ಕಾರ ಸೂಚಿಸಬೇಕು. ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು. ಲಾಕ್‍ಡೌನ್ ನಿಂದಾಗಿ ದುಡಿಮೆ ಇಲ್ಲದೇ ಕೆಳ ವರ್ಗದ ಜೀವನಸ್ಥಿತಿ ಮತ್ತಷ್ಟು ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲರ ಸಹಾಯ ಪಡೆದುಕೊಳ್ಳಲಿ: ಸರ್ಕಾರ ಕೇವಲ ತಾನೇ ಕೆಲಸ ಮಾಡದೇ ಎಲ್ಲರ ಸಹಾಯ ಪಡೆದು ಒಗ್ಗಟ್ಟಿನಿಂದ ಕೊರೊನಾ ತಡೆಗೆ ಹೋರಾಟ ನಡೆಸಬೇಕಿದೆ. ವಿಪಕ್ಷದಲ್ಲಿರುವ ಅನುಭವಿ ನಾಯಕರನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪ್ರಧಾನ ಮಂತ್ರಿ ಕಾರ್ಯಾಲಯವೊಂದೇ ಎಲ್ಲ ಕೆಲಸಗಳನ್ನು ಮಾಡಲಾರದು. ಎಲ್ಲ ರಾಜ್ಯಗಳ ಜೊತೆ ಸೇರಿ ಹಿರಿಯ ನಾಯಕರಿಂದ ಉತ್ತಮ ಸಲಹೆ ಪಡೆದು ಕೆಲಸ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು.

ದೊಡ್ಡ ಕಂಪನಿಗಳಿಂದ ಸಹಾಯ: ಕೇವಲ ಸರ್ಕಾರವೊಂದೇ ಶ್ರಮಪಟ್ಟರೇ ಅರ್ಥವ್ಯವಸ್ಥೆ ಚೇತರಿಕೆ ಕಾಣಲಾರದು. ಹಾಗಾಗಿ ಸುಸ್ಥಿತಿಯಲ್ಲಿರು ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಸಣ್ಣ ವ್ಯವಹಾರಸ್ಥರ ಸಹಾಯಕ್ಕೆ ಮುಂದೆ ಬರಬೇಕಿದೆ. ಸಣ್ಣ ಪ್ರಮಾಣದ ವಿತರಕರಿಗೆ ದೊಡ್ಡ ಕಂಪನಿಗಳು ನರೆವು ನೀಡಬೇಕು. ಒಂದು ವೇಳೆ ಅವಶ್ಯವಿದ್ದಲ್ಲಿ ಬಾಂಡ್ ಮಾರ್ಕೆಟ್ ನಿಂದ ದೊಡ್ಡ ಗಾತ್ರದ ಕಂಪನಿಗಳು ಹಣ ಪಡೆಯಲು ಅವಕಾಶಗಳಿವೆ ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *