ಕಾವೇರಿ ನೀರು ಹಂಚಿಕೆ- ಸುಪ್ರೀಂ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‍ಡಿಡಿ

Public TV
2 Min Read

ಹಾಸನ: ಕಾವೇರಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಎ ಕಾಳೇನಹಳ್ಳಿಯಲ್ಲಿ ನಡೆದ ಬೈಕ್ ಹಾಗೂ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ನ್ಯಾಯಯುತವಾಗಿ 40 ಟಿಎಂಸಿಗೂ ಅಧಿಕ ನೀರು ಸಿಗಬೇಕಿತ್ತು. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಮೋಸ ಮಾಡಿಲ್ಲ. ಆದರೂ ಅವರು ತಕರಾರು ಮಾಡಿದ್ರೆ ನಮ್ಮಲ್ಲೂ ಅಸ್ತ್ರಗಳಿವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸುಪ್ರೀಂ ತೀರ್ಪಿನಲ್ಲಿ ಏನಿದೆ? ಇಲ್ಲಿದೆ 14 ಪ್ರಮುಖ ಅಂಶಗಳು

ಕೇವಲ 10 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸಿಹಿ ಹಂಚಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾವ ಪುರುಷಾರ್ಥಕ್ಕೆ ಸಿಹಿ ಹಂಚಿದ್ದಾರೆ? ಇವರಿಗೇನಾದ್ರೂ ವಿವೇಚನೆ ಇದೆಯೇ ಎಂದು ಪ್ರಶ್ನಿಸಿದರು.

ಅಂತಿಮ ತೀರ್ಪು ನನಗೆ ತೃಪ್ತಿ ತಂದಿಲ್ಲ. ನಮ್ಮ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲೂ ಹೋರಾಟ ಮಾಡುವೆ. ಕೇವಲ 10 ಟಿಎಂಸಿ ನೀರನ್ನು ಬೆಂಗಳೂರು ಸೇರಿದಂತೆ ಎಲ್ಲಿಗೆ ಹಂಚಿಕೆ ಮಾಡುತ್ತೀರಿ ಎಂದು ಗೌಡರು ಪ್ರಶ್ನಿಸಿದರು. ಇದನ್ನೂ ಓದಿ: ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ. ನವನೀತ್ ಕೃಷ್ಣನ್ ಪ್ರತಿಕ್ರಿಯೆ

ಇದೇ ವೇಳೆ ವಿಧಾನಸಭೆ ಚುನಾವಣೆ ಮೇ ನಲ್ಲಿ ನಡೆಯಲಿದ್ದು, ಏಪ್ರಿಲ್ ನಲ್ಲಿ ಚುನಾವಣೆ ಘೋಷಣೆಯಾಗಬಹುದು ಎಂದರು. ಇದನ್ನೂ ಓದಿ: ಕಾವೇರಿ ತೀರ್ಪಿನಿಂದ ನಮಗೆ ಲಾಭ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ: ತಮಿಳುನಾಡು ರೈತರು

ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?: ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು. ಈಗ ಸುಪ್ರೀಂ ಕೋರ್ಟ್ ಕರ್ನಾಟಕ ತಮಿಳುನಾಡಿಗೆ ಪ್ರತಿವರ್ಷ 177.25 ಟಿಎಂಸಿ ನೀರನ್ನು ಹರಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *