ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಸ್ಪತ್ರೆಗೆ ದಾಖಲು

Public TV
2 Min Read

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಇಂದು (ಗುರುವಾರ) ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡಾ. ಸತ್ಯನಾರಾಯಣ ಮೈಸೂರು ನೇತೃತ್ವದ ತಂಡದಿಂದ ದೇವೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ತಜ್ಞ ವೈದ್ಯರ ತಂಡ ನಿಗಾವಹಿಸಿದೆ. ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಗಲಾಟೆ ಸೃಷ್ಟಿಸಿದ ಕೇಂದ್ರ ಸರ್ಕಾರದ ಅನುದಾನ ಫೈಟ್

ಜ್ವರ ಮತ್ತು ಗಂಟಲು ನೋವಿನಿಂದ ಹೆಚ್‌ಡಿಡಿ ಬಳಲುತ್ತಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಜ್ವರ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇಂದು ಅಸ್ಪತ್ರೆಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಗಾಬರಿಯಾಗುವಂತಹ ಪರಿಸ್ಥಿತಿ ಇಲ್ಲ. ದೇವೇಗೌಡರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ದೇವೇಗೌಡರಿಗೆ ಚಿಕಿತ್ಸೆ ನೀಡಿದ ಡಾ.ಸತ್ಯನಾರಾಯಣ ಮಾತನಾಡಿ, ದೇವೇಗೌಡರು ಉಸಿರಾಟದ ಸಮಸ್ಯೆಯಿಂದ ಅಡ್ಮಿಟ್ ಆಗಿದ್ದಾರೆ. ರೆಸ್ಪಿರೇಟರಿ ಇನ್ಫೆಕ್ಷನ್ ಆಗಿದೆ. ಎರಡು-ಮೂರು ದಿನದಿಂದ ಇನ್ಫೆಕ್ಷನ್ ಆಗಿದೆ. ಚಿಕಿತ್ಸೆ ನೀಡಲು ಒಂದು ತಂಡವಿದೆ. ಪರಿಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡ್ತೇವೆ. ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಎರಡು ಮೂರು ದಿನ ಚಿಕಿತ್ಸೆ ನಡೆಯಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟು ಶಿಕ್ಷಕಿ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ: ಸಿ.ಟಿ.ರವಿ

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮತ್ತಷ್ಟು ಚಿಕಿತ್ಸೆಯ ಅಗತ್ಯತೆ ಇದೆ. ಇನ್ನೂ ಡಿಸ್ಚಾರ್ಜ್ ಬಗ್ಗೆ ತೀರ್ಮಾನ ಮಾಡಿಲ್ಲ. ಡಾ. ಮಂಜುನಾಥ್ ಅವರು ಕೂಡ ಇಲ್ಲೇ ಇದ್ದಾರೆ. ಮನೆಯವರು ಜೊತೆಗಿದ್ದಾರೆ. ಚಿಕಿತ್ಸೆಗಾಗಿ ವಿಶೇಷ ತಂಡ ಮಾಡಿದ್ದೇವೆ. ಆದಷ್ಟು ಬೇಗ ಗುಣಮುಖರಾಗಿ ಮನೆಗೆ ವಾಪಾಸ್ ಆಗಲಿ ಅನ್ನೋದು ಆಶಯವಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ದೇವೇಗೌಡರು, ನನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಉತ್ಪ್ರೇಕ್ಷಿತ ವರದಿಗಳು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ನನಗೆ ತಿಳಿದಿದೆ. ನಾನು ವಾಡಿಕೆಯ ತಪಾಸಣೆಗಾಗಿ ಮಾತ್ರ ಆಸ್ಪತ್ರೆಯಲ್ಲಿದ್ದೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಶೀಘ್ರದಲ್ಲೇ ಮನೆಗೆ ಹಿಂತಿರುಗುತ್ತೇನೆ. ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂದು ತಿಳಿಸಿದ್ದಾರೆ.

Share This Article