ಇಬ್ಬರು ಪೈಲಟ್‌ ಮೃತಪಟ್ಟರೂ ಪವಾಡಸದೃಶವಾಗಿ ಪಾರಾಗಿದ್ದ ಪಿಎಂ ಮೊರಾರ್ಜಿ ದೇಸಾಯಿ

2 Min Read

ಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಬುಧವಾರ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ (Plane Crash) ಮೃತಪಟ್ಟಿದ್ದಾರೆ. ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದು ಇದೇ ಮೊದಲಲ್ಲ.

ಈ ಹಿಂದೆ ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ವಿಜಯ್ ರೂಪಾನಿ ಮತ್ತು ವೈಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವಾರು ನಾಯಕರು ಇದೇ ರೀತಿಯ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ರಾಜಕೀಯ ನಾಯಕರು ಇಂತಹ ಅಪಘಾತಗಳಲ್ಲಿ ಬದುಕುಳಿದ ಅಪರೂಪದ ಸಂದರ್ಭಗಳಿವೆ. ಅನೇಕರಿಗೆ ಆಶ್ಚರ್ಯವಾಗುವಂತೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ (PM Morarji Desai) ವಿಮಾನ ದುರಂತ ಸಂಭವಿಸಿದರೂ ಪವಾಡಸದೃಶವಾಗಿ ಪಾರಾಗಿದ್ದರು.

ಈ ಘಟನೆ ನಡೆದಿದ್ದು ನವೆಂಬರ್ 4, 1977 ರಂದು. ದೆಹಲಿಯ ಪಾಲಂ ನಿಲ್ದಾಣದಿಂದ ಮೊರಾರ್ಜಿ ದೇಸಾಯಿ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಅಸ್ಸಾಂಗೆ (Assam) ಹೊರಟಿತ್ತು. ರಷ್ಯಾ ನಿರ್ಮಿತ ಟುಪೋಲೆವ್ ಟಿಯು-124 ವಿಮಾನವು ಇನ್ನೇನು ಲ್ಯಾಂಡಿಂಗ್‌ ಮಾಡಬೇಕು ಎನ್ನುವಾಗ ಭತ್ತದ ಗದ್ದೆಯಲ್ಲಿ ಅಪಘಾತಕ್ಕೀಡಾಗಿತ್ತು.

ಸಂಜೆ ವಿಮಾನ ರನ್‌ವೇಯಲ್ಲಿ ಇಳಿಯಲು ಸಿದ್ಧವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಎತ್ತರಕ್ಕೆ ಹಾರಿತು. ವಿಮಾನವು ರನ್‌ವೇಯನ್ನು ದಾಟಿ ವಾಯುನೆಲೆಯ ದೂರದಲ್ಲಿದ್ದ ಗದ್ದೆಗೆ ಅಪ್ಪಳಿಸಿತ್ತು. ವಿಮಾನ ಅಪ್ಪಳಿಸಿದ ರಭಸಕ್ಕೆ ಕಾಕ್‌ಪಿಟ್ ವಿಮಾನದಿಂದ ಬೇರ್ಪಟ್ಟಿತು. ಇಬ್ಬರು ಪೈಲಟ್‌ಗಳು ಮತ್ತು ಮೂವರು ಸಿಬ್ಬಂದಿ ಸಾವನ್ನಪ್ಪಿದರು. ಇದನ್ನೂ ಓದಿ: ಅಜಿತ್‌ ಪವಾರ್‌ ದುರ್ಮರಣ – ಕೊನೆಯ 26 ನಿಮಿಷದಲ್ಲಿ ಏನಾಯ್ತು?

ಪತನಗೊಂಡ ನಂತರ 81 ವರ್ಷದ ಮೊರಾರ್ಜಿ ದೇಸಾಯಿ ಅವರನ್ನು ಕೂಡಲೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ವಿಮಾನದಲ್ಲಿ ಕಾಂಗ್ರೆಸ್ ನಾಯಕ ಪಿಕೆ ತುಂಗೋನ್, ಗುಪ್ತಚರ ಬ್ಯೂರೋದ ಹಿರಿಯ ಅಧಿಕಾರಿ, ದೇಸಾಯಿ ಅವರ ಮಗ ಕಾಂತಿಭಾಯಿ ಮತ್ತು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ನಾರಾಯಣ್ ದೇಸಾಯಿ ಕೂಡ ಇದ್ದರು. ಇವರೆಲ್ಲರೂ ಅಪಘಾತದಿಂದ ಪಾರಾಗಿದ್ದರು.

ದುರಂತದ ಬಳಿಕ ಮೊರಾರ್ಜಿ ದೇಸಾಯಿ, ನನಗೆ ಏನು ಆಗಿಲ್ಲ, ಚೆನ್ನಾಗಿದ್ದೇನೆ. ಮೊದಲು ಗಾಯಗೊಂಡವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪದೇ ಪದೇ ರಕ್ಷಣಾ ಸಿಬ್ಬಂದಿಗೆ ಹೇಳುತ್ತಿದ್ದರು. ಪ್ರಧಾನಿಯೊಬ್ಬರು ಸೇವೆ ಸಲ್ಲಿಸುತ್ತಿದ್ದಾಗಲೇ ನಡೆದ ಅತ್ಯಂತ ದೊಡ್ಡ ವಿಮಾನ ದುರಂತಗಳಲ್ಲಿ ಇದು ಒಂದಾಗಿದೆ.

ತನಿಖೆಯ ವೇಳೆ ವಿಮಾನವು ತನ್ನ ಮೊದಲ ಪ್ರಯತ್ನದಲ್ಲಿ ನಿಗದಿಯಾಗಿದ್ದ ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ತಪ್ಪಿಸಿಕೊಂಡಿತ್ತು. ನಂತರ ಎರಡನೇ ಬಾರಿ ಇಳಿಯಲು ಪ್ರಯತ್ನಿಸಿದಾಗ ಎತ್ತರದ ಮರಕ್ಕೆ ಡಿಕ್ಕಿ ಹೊಡೆದು, ಎಡ ಭಾಗದ ರೆಕ್ಕೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ವಿಮಾನ ಪತನಗೊಂಡ ವಿಚಾರ ಬೆಳಕಿಗೆ ಬಂದಿತ್ತು.

1977 ರಿಂದ 1979 ರವರೆಗೆ ಭಾರತದ ನಾಲ್ಕನೇ ಪ್ರಧಾನ ಮಂತ್ರಿಯಾಗಿ ಮೊರಾರ್ಜಿ ದೇಸಾಯಿ ಸೇವೆ ಸಲ್ಲಿಸಿದ್ದರು. ಜನತಾ ಪಕ್ಷದ ಒಕ್ಕೂಟವನ್ನು ಮುನ್ನಡೆಸಿದ ಮತ್ತು ಕಾಂಗ್ರೆಸ್ಸೇತರ ಸರ್ಕಾರವನ್ನು ಮುನ್ನಡೆಸಿದ ಮೊದಲ ನಾಯಕ ಇವರಾಗಿದ್ದರು.

Share This Article