ಶ್ರೇಷ್ಠ ನಾಯಕನನ್ನ ಭಾರತ ಕಳೆದುಕೊಂಡಿದೆ: ಪ್ರಧಾನಿ ಮೋದಿ ಸಂತಾಪ

Public TV
2 Min Read

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (92) ಅವರಿಂದು ಅನಾರೋಗ್ಯದಿಂದ ನಿಧನ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಸಂತಾಪ ನುಡಿಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮನಮೋಹನ್‌ ಸಿಂಗ್‌ ಅವರೊಂದಿಗಿನ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ ಇನ್ನಿಲ್ಲ

ಡಾ.ಮನಹೋಹನ್‌ ಸಿಂಗ್‌ ಜೀ ಪ್ರಧಾನಿಯಾಗಿದ್ದಾಗ, ನಾನು ಗುಜರಾತ್‌ ಮುಖ್ಯಮಂತ್ರಿ ಆಗಿದ್ದೆ. ಇಬ್ಬರೂ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೆವು. ಆಡಳಿಯಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚೆ ನಡೆಸಿದ್ದೇವೆ. ಅವರ ಬುದ್ಧಿವಂತಿಕೆ, ನಮ್ರತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ನಾನು ಮನಮೋಹನ್‌ ಸಿಂಗ್‌ ಜೀ ಅವರ ಕುಟುಂಬ ಹಾಗೂ ಅಸಂಖ್ಯಾತ ಅಭಿಮಾನಿಗಳೊಂದಿಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು.. ಈ ದಿನ ಭಾರತವು ತನ್ನ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾದ ಮನಮೋಹನ್ ಸಿಂಗ್ ಜೀ ಅವರನ್ನ ಕಳೆದುಕೊಂಡಿದೆ. ಹಣಕಾಸು ಸಚಿವರು ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಆಡಳಿತ ನಡೆಸಿದ ಕೆಲವೇ ವರ್ಷಗಳಲ್ಲಿ ಆರ್ಥಿಕತೆ ನೀತಿಯ ಮೇಲೆ ಬಲವಾದ ಮುದ್ರೆ ಒತ್ತಿದರು. ನಮ್ಮ ದೇಶದ ಪ್ರಧಾನಿಯಾಗಿ ಅವರು ಜನಜೀವನ ಸುಧಾರಣೆಗೆ ವ್ಯಾಪಕ ಕೊಡುಗೆ ನೀಡಿದ್ದಾರೆ, ಅನೇಕ ಪ್ರಯತ್ನಗಳನ್ನ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.

ಪಕ್ಷ ಬದ್ಧತೆ ಸಮರ್ಪಣೆಗೆ ಹೆಸರುವಾಸಿಯಾಗಿರುವ ಮನಮೋಹನ್ ಸಿಂಗ್ ಅವರನ್ನ ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಡಿಹೊಗಳಿದ್ದರು. ಮನ್‌ಮೋಹನ್‌ ಸಿಂಗ್ ಅವರು ಗಾಲಿಕುರ್ಚಿಯಲ್ಲೂ ಕೆಲಸ ಮಾಡಿದರು ಅಂತ ಹೇಳಿದ್ದರು. ಇದನ್ನೂ ಓದಿ: Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್‌ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಅವರು ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದರು. ಬಳಿಕ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಆರ್ಥಿಕತೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿದರು. ವ್ಯಾಪಕ ಸುಧಾರಣೆಗಳನ್ನ ಜಾರಿಗೆ ತಂದಿದ್ದರು. ಬಳಿಕ 2004 ರಿಂದ 2014ರ ವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.  ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಸ್ಪತ್ರೆಗೆ ದಾಖಲು

Share This Article